ರಾಯ್‌ಬರೇಲಿ: ‘ಐಷಾರಾಮಿ ವಿಹಾರನೌಕೆ ಎಂವಿ ಗಂಗಾ ವಿಲಾಸ್ ಬಗ್ಗೆ ಬಿಜೆಪಿ ಸರ್ಕಾರವು ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ವಾಸ್ತವವಾಗಿ ಈ ನದಿವಿಹಾರ ನೌಕಾಸೇವೆಯು ಕಳೆದ 17 ವರ್ಷಗಳಿಂದ ಇದೆ ಎಂದು ನನಗೆ ಮಾಹಿತಿ ದೊರೆತಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ಈ ಐಷಾರಾಮಿ ನೌಕೆಯಲ್ಲಿ ಒಂದು ಬಾರ್ ಕೂಡಾ ಇದೆ ಎಂದು ಕೇಳಿದ್ದೇನೆ’ ಎಂದೂ ಅವರು ಹೇಳಿದ್ದಾರೆ.
‘ಈ ನೌಕೆಯು 17 ವರ್ಷಗಳಿಂದಲೂ ಸೇವೆಯಲ್ಲಿದೆ. ಇದು ಹೊಸದಲ್ಲ. ನೌಕೆಯಲ್ಲಿ ಕೆಲವು ಭಾಗಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ. ಆದರೆ, ಈ ನೌಕೆಯನ್ನು ಈಗ ನಾವು ಆರಂಭಿಸಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಮತ್ತು ಪ್ರಚಾರದಲ್ಲಿ ಬಹಳ ಮುಂದಿದ್ದಾರೆ. ಅಲ್ಲಿ ಬಾರ್ ಕೂಡಾ ಇದೆ ಎಂಬುದು ಕೇಳಿಬಂದಿದ್ದು, ಬಾರ್ ಇದೆಯೇ ಇಲ್ಲವೇ ಎಂಬುದನ್ನು ಬಿಜೆಪಿಯವರೇ ಹೇಳಬಹುದು’ ಎಂದೂ ಅಖಿಲೇಶ್ ವ್ಯಂಗ್ಯವಾಡಿದ್ದಾರೆ.
ಜಗತ್ತಿನ ಅತ್ಯಂತ ಉದ್ದದ ವಿಹಾರ ನೌಕೆ ‘ಎಂವಿ ಗಂಗಾ ವಿಲಾಸ್’ಗೆ ಪ್ರಧಾನಿ ಮೋದಿ ಅವರು ಜ. 13ರಂದು ಚಾಲನೆ ನೀಡಿದ್ದರು. ಉತ್ತರ ಪ್ರದೇಶದ ವಾರಾಣಸಿಯಿಂದ ಆರಂಭಗೊಳ್ಳುವ ಯಾತ್ರೆಯು 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ.