ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಸಂವಿಧಾನವೇ ಸರ್ವಸ್ವ: ಪ್ರಧಾನಿ ನರೇಂದ್ರ ಮೋದಿ

ಅಂಬೇಡ್ಕರ್‌ ಬಂದರೂ ಸಂವಿಧಾನ ರದ್ದು ಮಾಡಲು ಸಾಧ್ಯವಿಲ್ಲ: ಮೋದಿ
Published 12 ಏಪ್ರಿಲ್ 2024, 14:05 IST
Last Updated 12 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಜೈಪುರ: ಬಿಜೆಪಿಯು ಸಂವಿಧಾನವನ್ನು ನಾಶಮಾಡಲು ಹೊರಟಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರವು ಸಂವಿಧಾನವನ್ನು ಪೂಜ್ಯಭಾವನೆಯಿಂದ ಕಾಣುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ರಾಜಸ್ಥಾನದ ಬಾಡ್ಮೆರ್‌ನಲ್ಲಿ ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರಕ್ಕೆ ಸಂವಿಧಾನವೇ ಸರ್ವಸ್ವವಾಗಿದ್ದು, ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಬಂದರೂ ಈಗ ಸಂವಿಧಾನವನ್ನು ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. 

‘ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ನಾಶಪಡಿಸಲು ಯತ್ನಿಸಿದ್ದ ಕಾಂಗ್ರೆಸ್ ಈಗ ಸಂವಿಧಾನದ ಹೆಸರಿನಲ್ಲಿ ಮೋದಿ ಅವರನ್ನು ತೆಗಳಲು ಮುಂದಾಗಿದೆ’ ಎಂದು ಕಿಡಿಕಾಡಿದರು.

ಸಂವಿಧಾನಕ್ಕೆ ತಿದ್ದುಪಡಿ ತರಲು ಬಿಜೆಪಿಯು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೇರುವುದು ಅಗತ್ಯ ಎಂದು ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆ ಈಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿತ್ತು. ‘ಅಂಬೇಡ್ಕರ್‌ ಅವರ ಸಂವಿಧಾನವನ್ನು ನಾಶಮಾಡುವುದು ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು. ಅನಂತಕುಮಾರ್‌ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ‘ಅದು ಅವರ ವೈಯಕ್ತಿಕ ಅಭಿಪ್ರಾಯ’ ಎಂದಿತ್ತು. 

‘ದೇಶದ ಶಕ್ತಿಗುಂದಿಸುವ ವಿಪಕ್ಷಗಳ ಮೈತ್ರಿ’: ‘ಇಂಡಿಯಾ’ ಮೈತ್ರಿಕೂಟದ ಒಂದು ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಪ್ರಸ್ತಾವ ಮಾಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ‘ಭಾರತದ ಶಕ್ತಿಹೀನಗೊಳಿಸುವ ಇದು ಯಾವ ರೀತಿಯ ಮೈತ್ರಿಯಾಗಿದೆ’ ಎಂದು ಪ್ರಶ್ನಿಸಿದರು.

‘ನಮ್ಮ ಎರಡೂ ಕಡೆ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳು ಇರುವಾಗ, ಭಾರತವು ಅಣ್ವಸ್ತ್ರಗಳ ನಿಶ್ಯಸ್ತ್ರೀಕರಣದ ಬಗ್ಗೆ ಯೋಚಿಸಬೇಕೆ? ‘ಇಂಡಿ’ ಮೈತ್ರಿಕೂಟವು ಯಾರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಾನು ಕಾಂಗ್ರೆಸ್‌ಅನ್ನು ಕೇಳಲು ಬಯಸುತ್ತೇನೆ’ ಎಂದರು.

‘ವಿಪಕ್ಷಗಳದ್ದು ಮೊಘಲರ ಮನಸ್ಥಿತಿ’

‘ಶ್ರಾವಣ ಮಾಸದಲ್ಲಿ ಮಾಂಸ ತಿಂದು ಅದರ ವಿಡಿಯೊ ಹರಿಯಬಿಡುವ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳದ್ದು ಮೊಘಲರ ಮನಸ್ಥಿತಿ’ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಳೆದ ವರ್ಷ ಲಾಲು ಪ್ರಸಾದ್‌ ಅವರ ದೆಹಲಿಯ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರಲ್ಲದೆ ಕುರಿ ಮಾಂಸ ತಿಂದಿದ್ದರು. ಉಧಂಪುರದಲ್ಲಿ ಶುಕ್ರವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಮೋದಿ ‘ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಜಾಮೀನಿನಲ್ಲಿ ಹೊರಬಂದಿರುವ ವ್ಯಕ್ತಿಯೊಬ್ಬರ ಮನೆಗೆ ಇನ್ನೊಬ್ಬ ವ್ಯಕ್ತಿ ಹೋಗಿದ್ದರು. ಶ್ರಾವಣ ತಿಂಗಳಲ್ಲಿ ನಡೆದ ಔತಣ ಕೂಟದಲ್ಲಿ ಅವರು ಕುರಿ ಮಾಂಸ ತಿಂದಿದ್ದರು. ಅಷ್ಟು ಮಾತ್ರವಲ್ಲದೆ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟು ಮಾಡಬೇಕೆಂಬ ಉದ್ದೇಶದಿಂದ ಅದರ ವಿಡಿಯೊ ಮಾಡಿ ಹರಿಯಬಿಟ್ಟಿದ್ದರು’ ಎಂದು ದೂರಿದರು.

‘ಸಸ್ಯಾಹಾರ ಅಥವಾ ಮಾಂಸಾಹಾರ ಸೇವಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅವರು ಬೇರೆಯದೇ ಉದ್ದೇಶ (ಭಾವನೆಗಳಿಗೆ ನೋವುಂಟುಮಾಡುವ) ಹೊಂದಿದ್ದರು. ಮೊಘಲರಿಗೆ ಭಾರತದ ರಾಜರನ್ನು ಸೋಲಿಸಿದಾಗ ತೃಪ್ತಿ ಸಿಗಲಿಲ್ಲ. ಇಲ್ಲಿನ ದೇವಾಲಯಗಳನ್ನು ನಾಶ ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತಿತ್ತು’ ಎಂದರು.

ಪ್ರಧಾನಿ ಕಂಗಾಲು: ಜೈರಾಮ್

ನವದೆಹಲಿ (ಪಿಟಿಐ): ಶ್ರಾವಣ ಮಾಸದಲ್ಲಿ ಮಾಂಸ ಸೇವನೆ ವಿಚಾರ ಉಲ್ಲೇಖಿಸಿದ ಪ್ರಧಾನಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ತಿರುಗೇಟು ನೀಡಿದ್ದು, ‘ಪ್ರಧಾನಿ ಅವರು ತಮ್ಮ ರೋಗಗ್ರಸ್ತ ಮನಃಸ್ಥಿತಿಯ ಹೊಸ ಉದಾಹರಣೆಯನ್ನು ಪ್ರತಿದಿನವೂ ನಮಗೆ ಒದಗಿಸುತ್ತಿದ್ದಾರೆ. ಕಂಗಾಲಾಗಿರುವ ಅವರು ಜನರ ಗಮನ ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಪ್ರಧಾನಿ ಅವರಂತೆ ನಾವು ಯಾವ ನಾಯಕ, ಯಾವ ತಿಂಗಳಲ್ಲಿ ಏನನ್ನು ತಿಂದ ಎಂಬುದರ ಮಾಹಿತಿ ಇಟ್ಟುಕೊಂಡಿಲ್ಲ. ಆದರೆ ಪೌಷ್ಟಿಕತೆಗೆ ಸಂಬಂಧಿಸಿದ ಅಂಕಿ–ಅಂಶ ನಮ್ಮಲ್ಲಿ ಇದೆ’ ಎಂದು ಜೈರಾಮ್ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘2015–16 ಮತ್ತು 2019–21ರ ಅವಧಿಯಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಸುಮಾರು ಶೇ 10 ರಷ್ಟು ಹೆಚ್ಚಳವಾಗಿದೆ. 15 ರಿಂದ 19 ವರ್ಷದೊಳಗಿನ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ 9.2 ರಷ್ಟು ಏರಿಕೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT