ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹೇಳಿಕೆ ಟೀಕಿಸಿದ್ದಕ್ಕೆ BJP ಅಲ್ಪಸಂಖ್ಯಾತ ಮೋರ್ಚಾ ನಾಯಕನ ಉಚ್ಛಾಟನೆ

Published 24 ಏಪ್ರಿಲ್ 2024, 14:10 IST
Last Updated 24 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ಜೈಪುರ(ರಾಜಸ್ಥಾನ): ಸಂಪತ್ತು ಮರುಹಂಚಿಕೆ ಕುರಿತ ಮೋದಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಕಾರಣಕ್ಕೆ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಭಾನುವಾರ ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್‍ಯಾಲಿಯ ವೇಳೆ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೆಚ್ಚು ಮಕ್ಕಳಿದ್ದವರಿಗೆ ಮರು ಹಂಚಿಕೆ ಮಾಡುತ್ತದೆ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದ್ದರು.

ಮೋದಿ ಅವರ ಹೇಳಿಕೆ ಕುರಿತು ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿದ್ದ ಘನಿ, ಒಬ್ಬ ಮುಸ್ಲಿಂ ವ್ಯಕ್ತಿಯಾಗಿ ಪ್ರಧಾನಿ ಅವರ ಹೇಳಿಕೆ ನೋವುಂಟು ಮಾಡಿದೆ ಎಂದು ಹೇಳಿದ್ದರು.

‘ಮತ ಕೇಳಲು ಮುಸ್ಲಿಮರ ಮನೆ ಬಾಗಿಲಿಗೆ ಹೋದಾಗ ಪ್ರಧಾನಿಯವರ ಹೇಳಿಕೆ ಕುರಿತಂತೆ ಸಮುದಾಯದ ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಜಾಟ್ ಸಮುದಾಯವು ಕೋಪಗೊಂಡಿದ್ದು, ಚುರು ಮತ್ತು ಇತರ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ’ ಎಂದು ತಿಳಿಸಿದ್ದರು.

ಅಲ್ಲದೇ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ತನ್ನ ವಿರುದ್ದ ಕ್ರಮಕೈಗೊಂಡರೆ ಹೆದರುವುದಿಲ್ಲ ಎಂದಿದ್ದರು.

ಘನಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ‘ಮಾಧ್ಯಮಗಳ ಮೂಲಕ ಪಕ್ಷದ ವರ್ಚಸ್ಸ ಅನ್ನು ಹಾಳು ಮಾಡಲು ಘನಿ ಪ್ರಯತ್ನಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಹೇಳಿದರು.

ಅಲ್ಲದೇ, ಪಕ್ಷದ ಘನತೆಗೆ ಚ್ಯುತಿ ತಂದಿರುವ ಹಿನ್ನೆಲೆ ಉಸ್ಮಾನ್ ಘನಿ ಅವರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ ಎಂದು ಅವರು ತಿಳಿಸಿದರು.

ಬಿಕಾನೇರ್ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT