ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಅಪಹರಿಸಿ, ಜೈಲಿನಲ್ಲೇ ಹಲ್ಲೆ

ಉತ್ತರಪ್ರದೇಶದ ದೇವೊರಿಯಾ ಜೈಲಿನಲ್ಲಿ ಪಾತಕಿ ಅತೀಕ್ ಅತಿರೇಕ
Last Updated 31 ಡಿಸೆಂಬರ್ 2018, 20:13 IST
ಅಕ್ಷರ ಗಾತ್ರ

ಲಖನೌ: ಜೈಲಿನಲ್ಲಿರುವ ಪಾತಕಿ ಅತೀಕ್ ಅಹ್ಮದ್ ಹಾಗೂ ಆತನ ಸಹಚರರು ತಮ್ಮ ಮೇಲೆ ಹಲ್ಲೆ ಮಾಡಿ, ₹40 ಕೋಟಿ ಮೌಲ್ಯದ ಆಸ್ತಿಯನ್ನು ಒತ್ತಾಯಪೂರ್ವಕವಾಗಿ ಅವರ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಉದ್ಯಮಿ ಮೋಹಿತ್ ಜೈಸ್ವಾಲ್ ಆರೋಪಿಸಿದ್ದಾರೆ.

ಅತೀಕ್‌ನ ಪುತ್ರ ಉಮರ್ ಹಾಗೂ ಅವರ ಗುಂಪಿನ 15 ಸದಸ್ಯರು ಕಳೆದ ವಾರ ತಮ್ಮನ್ನು ಅಪಹರಿಸಿ, 300 ಕಿ.ಮೀ ದೂರದ ದೇವೊರಿಯಾ ಜೈಲಿಗೆ ಕರೆದೊಯ್ದು, ಅಲ್ಲಿನ ಕೋಣೆಯೊಂದರಲ್ಲಿ ಥಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಜೈಸ್ವಾಲ್ ಅವರ ಕೈ ಬೆರಳು ಮುರಿದಿದೆ.

ಜೈಸ್ವಾಲ್ ಅವರ ದೂರಿನ ಮೇರೆಗೆ ಅತೀಕ್, ಆತನ ಪುತ್ರ ಉಮರ್, ಸಹಚರರಾದ ಫಾರೂಕ್, ಖಾಕಿ ಅಹ್ಮದ್, ಜಾಫರ್ ಉಲ್ಲಾ, ಗುಲಾಮ್ ಸರ್ವರ್ ಹಾಗೂ 10 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಹತ್ಯೆ ಯತ್ನ, ಅಪಹರಣ ಸೇರಿದಂತೆ ವಿವಿಧ ಸೆಕ್ಷನ್‌ ಅಡಿ ಲಖನೌದ ಕೃಷ್ಣಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು:

‘ಅತೀಕ್‌ ಸಹಚರನೊಬ್ಬ ಜೈಸ್ವಾಲ್ ಅವರನ್ನು ಅವರ ಎಸ್‌ಯುವಿಯಲ್ಲೇ ದೇವೊರಿಯಾ ಜೈಲಿಗೆ ಡಿಸೆಂಬರ್ 26ರಂದು ಕರೆದೊಯ್ದಿದ್ದಾನೆ. ಅತೀಕ್‌ನನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲೇ ಉದ್ಯಮಿಯನ್ನು ಥಳಿಸಲಾಗಿದೆ’ ಎಂದು ಕೃಷ್ಣಾ ನಗರ ಸರ್ಕಲ್‌ ಇನ್‌ಸ್ಪೆಕ್ಟರ್‌ ಲಾಲ್‌ಪ್ರತಾಪ್ ಸಿಂಗ್ ಹೇಳಿದ್ದಾರೆ.

ಅಧೀಕ್ಷಕರು ಹೇಳುವುದೇನು?:

‘ಅತೀಕ್ ಭೇಟಿಗೆ ಜೈಸ್ವಾಲ್ ಬಂದಿದ್ದರು. ಜೈಲು ನಿಯಮಾವಳಿ ಪ್ರಕಾರ ಭೇಟಿಗೆ ಅವಕಾಶ ನೀಡಲಾಯಿತು. ಜೈಸ್ವಾಲ್ ಜೈಲಿನಿಂದ ಹೊರಡುವ ಮುನ್ನ ಅಪಹರಣ ಅಥವಾ ಹಲ್ಲೆ ನಡೆದಿರುವ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಜೈಲು ಅಧೀಕ್ಷಕ ಡಿ.ಕೆ. ಪಾಂಡೆ ಸ್ಪಷ್ಟಪಡಿಸಿದ್ದಾರೆ.

‘ಕಾರಾಗೃಹದ ಸಿಸಿಟಿವಿ ತಪಾಸಣೆ ಮಾಡಲಾಗಿದೆ. ಕೆಲವು ದೃಶ್ಯಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ತನಿಖೆ ನಡೆಸಲು ಕಾರಾಗೃಹ ಡಿಜಿಪಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಐವರು ಅಧಿಕಾರಿಗಳ ಅಮಾನತು :ಅತೀಕ್ ಪ್ರಕರಣ ಸಂಬಂಧ ಸಹಾಯಕ ಜೈಲರ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆಅತೀಕ್ ಅಹ್ಮದ್‌ನನ್ನು ದೇವರಿಯಾ ಜೈಲಿನಿಂದ ರಾಯ್‌ಬರೇಲಿ ಜೈಲಿಗೆ ವರ್ಗಾವಣೆ ಮಾಡಲು ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದೆ.

ವರದಿ ಕೇಳಿದ ಸರ್ಕಾರ:ಉದ್ಯಮಿ ಜೈಸ್ವಾಲ್ ನೀಡಿರುವ ದೂರಿನ ಸಂಬಂಧ ದೇವರಿಯಾ ಜೈಲಿನಲ್ಲಿ ಭದ್ರತಾಲೋಪ ಆಗಿರುವ ಕುರಿತು ಮಂಗಳವಾರ ವರದಿ ನೀಡುವಂತೆ ಕಾರಾಗೃಹ ಎಡಿಜಿ ಅವರಿಗೆ ಉತ್ತರ ಪ್ರದೇಶ ಸರ್ಕಾರ ಸೂಚನೆ ನೀಡಿದೆ.

ಇಬ್ಬರನ್ನು ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾರು ಈ ಅತೀಕ್?

ಸಮಾಜವಾದಿ ಪಕ್ಷದ ಮಾಜಿ ಸಂಸದ,ಭೂಗತ ಪಾತಕಿ ಅತೀಕ್ ಅಹ್ಮದ್ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಆರೋಪಿ ಆಗಿರುವ ಈತ, ಕಳೆದ ಮಾರ್ಚ್‌ನಿಂದ ದೇವರಿಯಾ ಜೈಲಿನಲ್ಲಿದ್ದಾನೆ. ಅತೀಕ್‌ನ ವಿರೋಧಿ ಎಂದು ಕರೆಯಲಾಗುವ ಪಾತಕಿ ಮುನ್ನ ಭಜರಂಗಿಯನ್ನು ಭಾಗ್‌ಪತ್ ಜೈಲಿನ ಕೈದಿಗಳೇ ಹತ್ಯೆ ಮಾಡಿದ್ದರು.

2004ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ. 2009ರಲ್ಲಿ ಅಪ್ನಾ ದಳ ಅಭ್ಯರ್ಥಿಯಾಗಿ ಲೋಕಸಭೆಗೆ ಹಾಗೂ 2012ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ.

ಕೈದಿಗಳು ರಾಯ್‌ಬರೇಲಿ ಜೈಲಿನೊಳಗೆ ಮದ್ಯಪಾನ ಮಾಡುತ್ತಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಆರು ಮಂದಿ ಜೈಲು ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು. ಉತ್ತರ ಪ್ರದೇಶದ ಜೈಲುಗಳು ಕೈದಿಗಳಿಂದ ತುಂಬಿತುಳುಕುತ್ತಿದ್ದು, ನಿಗಾ ವಹಿಸಲು ಜೈಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ, ಲೋಹಶೋಧಕ ಯಂತ್ರಗಳನ್ನು ಅಳವಡಿಸಿದ್ದರೂ ಅವು ಕಾರ್ಯ ನಿರ್ವಹಿಸುತ್ತಿಲ್ಲ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೈದಿಗಳ ಚಟುವಟಿಕೆಗಳನ್ನು ನಿಗ್ರಹಿಸುವ ಉದ್ದೇಶದಿಂದ ಅವರನ್ನು ಜೈಲಿನಿಂದ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT