ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಚಂದ್ರ ಚುಂಬನ: ವಿಶ್ವದೆಲ್ಲೆಡೆ ಕುತೂಹಲ– ಯಶಸ್ಸಿಗೆ ಹಾರೈಕೆ

ವಿಕ್ರಮನಿಗೆ ಎಲೆಕ್ಟ್ರಾನಿಕ್ ಮಿದುಳೇ ಆಸರೆ
Published 22 ಆಗಸ್ಟ್ 2023, 20:46 IST
Last Updated 22 ಆಗಸ್ಟ್ 2023, 20:46 IST
ಅಕ್ಷರ ಗಾತ್ರ

-ಎಸ್‌.ರವಿಪ್ರಕಾಶ್

ಬೆಂಗಳೂರು: ವಿಕ್ರಮ್ (ಲ್ಯಾಂಡರ್) ಚಂದ್ರನ ಅಂಗಳಕ್ಕೆ ಕಾಲಿಡುವ ಅಂತಿಮ ಕ್ಷಣಗಳು ಹೇಗಿರುತ್ತವೆ. ಆತನ ‘ಎಲೆಕ್ಟ್ರಾನಿಕ್ ಮಿದುಳು’ ಶಾಂತ ಚಿತ್ತದಿಂದ ಅತೀವ ಒತ್ತಡ ನಿವಾರಿಸಿಕೊಂಡು ಮುಗ್ಗರಿಸದೇ ಮೆಲ್ಲಗೆ ದೃಢ ಹೆಜ್ಜೆ ಇಡುತ್ತಾನೆಯೇ...?

ದೇಶ–ವಿದೇಶದ ಕೋಟ್ಯಂತರ ಜನರು ಕುತೂಹಲದಿಂದ ಕೇಳಿಕೊಳ್ಳುತ್ತಿರುವ, ಕೌತುಕದ ಗಳಿಗೆಯನ್ನು ಎದುರು ನೋಡುತ್ತಿರುವ ಬಾಹ್ಯಾಕಾಶ ವಿಜ್ಞಾನಿಗಳ ಮುಂದಿರುವ ಪ್ರಶ್ನೆಗಳು ಭಾರತದ ಮುಂದೆ ಕನಸುಗಳ ಗೋಪುರವನ್ನೇ ಕಟ್ಟಿವೆ.

ಚಂದ್ರಯಾನ–3 ಯೋಜನೆಯಲ್ಲಿ ದಣಿಯವರಿಯದೇ ಅಹೋರಾತ್ರಿ ತಮ್ಮನ್ನು ತೊಡಗಿಸಿಕೊಂಡು, ಅವಿಸ್ಮರಣೀಯ ಕ್ಷಣಕ್ಕೆ ಕಾತರರಾಗಿರುವ ದೇಶದ ಹೆಮ್ಮೆಯ ಇಸ್ರೊ ವಿಜ್ಞಾನಿಗಳು ವಿಕ್ರಮನ ನಡಿಗೆಯ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ. 

‘ವಿಕ್ರಮ್ ಖಂಡಿತಾ ಚಂದಿರನ ಮೇಲೆ ಅಡಿ ಇಡುತ್ತಾನೆ. ಎಲ್ಲವನ್ನೂ ಆತನಿಗೇ ಬಿಟ್ಟಿದ್ದೇವೆ. ಭೂಮಿಯಲ್ಲಿ ಕುಳಿತು ಆತನ ಚತುರತೆಯ ‘ಆಟ’ ನೋಡುವುದಷ್ಟೇ ನಮ್ಮ ಕೆಲಸ’ ಎಂದು ನಿರುಮ್ಮಳತೆಯಿಂದ ಹೇಳುತ್ತಾರೆ.

ಚಂದ್ರಯಾನ–2ರ ಲ್ಯಾಂಡರ್‌ನ ಅಪ್ಪಳಿಸುವಿಕೆಯ ಬಳಿಕ ಹಗಲು– ರಾತ್ರಿ ಎನ್ನದೇ ಶ್ರವಹಿಸಿ ರೂಪಿಸಿದ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ಅನೂಹ್ಯ ಪ್ರತಿಭೆಯ ಅನಾವರಣ ವಿಕ್ರಮ್ ಲ್ಯಾಂಡಿಂಗ್‌ ವೇಳೆ ಆಗಲಿದೆ. ಲ್ಯಾಂಡಿಂಗ್‌ನ ಯಶಸ್ಸಿಗಾಗಿ ಹಾರೈಕೆಗಳ ಮಹಾಪೂರವೇ ದೇಶ– ವಿದೇಶಗಳಿಂದ ಹರಿದು ಬರುತ್ತಿದೆ.

ಚಂದ್ರಯಾನ–3ರ ಲ್ಯಾಂಡರ್‌ನ ಇಳಿಯುವಿಕೆಯ ಕೊನೆ ರೋಚಕ ಕ್ಷಣಗಳು ಹೇಗಿರುತ್ತವೆ ಎಂಬುದನ್ನು ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದ್ದು ಹೀಗೆ...

ಈಗಾಗಲೇ ಚಂದ್ರನಿಗೆ ಅತಿ ಸನಿಹದಲ್ಲಿರುವ ಕಕ್ಷೆಯಲ್ಲಿ ವಿಕ್ರಮ್ 26 ಕೆ.ಜಿ ತೂಗುವ ಆರು ಚಕ್ರಗಳನ್ನು ಹೊಂದಿರುವ ಪ್ರಗ್ಯಾನ್‌(ರೋವರ್) ಅನ್ನು ಒಡಲಲ್ಲಿ ಇಟ್ಟುಕೊಂಡು ಚಂದ್ರನಿಗೆ ಕೋಳಿ ಮೊಟ್ಟೆ ಆಕಾರದಲ್ಲಿ ಸುತ್ತು ಹಾಕುತ್ತಿದೆ. ಸುಮಾರು 25 ಕಿ.ಮೀ.ಗಳಷ್ಟು ಎತ್ತರದಲ್ಲಿ ಕಾದು ನಿಂತಿದೆ.

ವಿಕ್ರಮ್‌ ಮೊದಲಿಗೆ ತನ್ನ ವೇಗವನ್ನು ಇಳಿಸಿಕೊಳ್ಳಬೇಕು. ಈಗ ಗಂಟೆಗೆ ಸುಮಾರು 5,000 ಕಿ.ಮೀನಷ್ಟು ವೇಗದಲ್ಲಿ ಸಾಗುತ್ತಿದೆ. ಆ ವೇಗವನ್ನು ಶೂನ್ಯಕ್ಕೆ ತಂದುಕೊಳ್ಳುವುದು ದೊಡ್ಡ ಸವಾಲು. ಕಕ್ಷೆಯಲ್ಲಿ ವೇಗ ಕಡಿಮೆ ಮಾಡಿಕೊಳ್ಳುತ್ತಿರುವಂತೆಯೇ ಕೆಳಗೆ ಬೀಳಲಾರಂಭಿಸುತ್ತದೆ. ಆಗ ವೇಗ, ದಿಕ್ಕು ತಪ್ಪಲಾರಂಭಿಸುತ್ತದೆ. ಎಲ್ಲವನ್ನೂ ಲೆಕ್ಕಹಾಕಿ ನಿಗದಿಯಾದ ಪ್ರದೇಶದಲ್ಲೇ ಬಂದಿಳಿಯುವಂತೆ ಮಾಡಬೇಕು. ಈ ಸಂದರ್ಭದಲ್ಲಿ ವಿಕ್ರಮ್ ಜೋಲಿ ಹೊಡೆಯುವ ಅಥವಾ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚು. ಅದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಲು ಬೀಳುವಾಗಿನ ವೇಗವನ್ನು ನಿಯಂತ್ರಿಸಿ ಸ್ವಸ್ಥಿತಿಗೆ ಬಂದು ನಿಲ್ಲಲು ರಾಕೆಟ್‌ಗಳನ್ನು ಉರಿಸಲಾಗುತ್ತದೆ. ಲ್ಯಾಂಡರ್‌ ಮತ್ತೆ ಕಕ್ಷೆಯತ್ತ ಸಾಗುತ್ತದೆ. 

ಕಡೆಯ 10–15 ನಿಮಿಷಗಳ ಸಮನ್ವಯದ ಕೆಲಸ ಮಾಡುವುದು ವಿಕ್ರಮ್‌ನ ‘ಎಲೆಕ್ಟ್ರಾನಿಕ್‌ ಮಿದುಳು’. ಕ್ಷಣ ಮಾತ್ರದಲ್ಲಿ ಎಲ್ಲ ಮಾಹಿತಿಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಲೆಕ್ಕಾಚಾರಗಳನ್ನು ಹಾಕಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಹೋಗುತ್ತದೆ. ಭೂಮಿಯಿಂದ ಯಾರೂ ನಿಯಂತ್ರಣ ಮಾಡುವುದಿಲ್ಲ. ಎಲ್ಲದಕ್ಕೂ ಸಾಫ್ಟ್‌ವೇರ್‌ ಮತ್ತು ಸೆನ್ಸಾರ್‌ಗಳು ಇರುತ್ತವೆ. ಅವುಗಳೇ ಎಲ್ಲವನ್ನೂ ನಿಭಾಯಿಸುತ್ತವೆ. 

ಕಕ್ಷೆ ಬಿಟ್ಟು ಹೊರಬರಲು ವೇಗ ನಿಯಂತ್ರಣ ಅತಿಮುಖ್ಯ. ವೇಗಕ್ಕೆ ಬ್ರೇಕ್‌ ಹಾಕುತ್ತಲೇ ಹಂತಹಂತವಾಗಿ ವೇಗ ತಗ್ಗಿಸುವ ಕೆಲಸ ಈ ಎಲೆಕ್ಟ್ರಾನಿಕ್ ಮಿದುಳೇ ಮಾಡುತ್ತದೆ. ಹೀಗಾಗಿ ಇದು ‘ಶಾಂತ ಚಿತ್ತ’ದಿಂದಲೇ ಕೆಲಸ ಮಾಡಬೇಕು ಎನ್ನುತ್ತಾರೆ ವಿಜ್ಞಾನಿಗಳು.

–––––––––––––

ಲ್ಯಾಂಡರ್‌ ಚಂದ್ರ ಸ್ಪರ್ಶ;ಸಂಜೆ 6.04

ಚಂದ್ರಸ್ಪರ್ಶದ ನೇರ ಪ್ರಸಾರ; ಸಂಜೆ 5.27

(ಭಾರತಿಯ ಕಾಲಮಾನದಂತೆ)

ನಿಗದಿಯಾದಂತೆ ಚಂದ್ರಸ್ಪರ್ಶವಾಗಲಿದೆ. ಲ್ಯಾಂಡರ್‌ ಒಳಗಿನ ವ್ಯವಸ್ಥೆಯನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ

– ಸೋಮನಾಥ್‌ ಅಧ್ಯಕ್ಷ ಇಸ್ರೊ

ತಪ್ಪು ಮರುಕಳಿಸದಂತೆ ಎಚ್ಚರಾವಸ್ಥೆ

ಚಂದ್ರಯಾನ–2 ರಲ್ಲಿ ಕೊನೆ ಗಳಿಗೆಯಲ್ಲಿ ಲ್ಯಾಂಡರ್‌ ನೆಲಕ್ಕೆ ಅಪ್ಪಳಿಸಿತ್ತು. ಆಗ ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಆಗಲಿಲ್ಲ. ಈ ಬಾರಿ ಎದುರಾಗಬಹುದಾದ ಎಲ್ಲ ರೀತಿಯ ಸವಾಲುಗಳನ್ನು ಮುಂಚಿತವಾಗಿ ಗ್ರಹಿಸಿಯೇ ಅದಕ್ಕೆ ಪರಿಹಾರೋಪಾಯಗಳನ್ನು ಉಪಕರಣಗಳ ಮೂಲಕ ಅಡಕಗೊಳಿಸಲಾಗಿದೆ. ಅವು ಎದುರಾಗಬಹುದಾದ ಸವಾಲುಗಳನ್ನು ಗ್ರಹಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತವೆ.  * ಕಳೆದ ಬಾರಿ ಲ್ಯಾಂಡಿಂಗ್ ಪ್ರದೇಶ ಚಿಕ್ಕದಾಗಿತ್ತು. ವಿಕ್ರಮ್‌ಗೆ ಅದು ಸಮಸ್ಯೆಯಾಗಿತ್ತು. ಈ ಬಾರಿ ಲ್ಯಾಂಡಿಂಗ್‌ ಪ್ರದೇಶದ ವಿಸ್ತೀರ್ಣ 2.5x4 ಕಿ.ಮೀ ಹೆಚ್ಚಿಸಲಾಗಿದೆ. ಅಧಿಕ ಸಾಮರ್ಥ್ಯದ ಆಧುನಿಕ ಉಪಕರಣಗಳನ್ನೂ ಅಳವಡಿಸಲಾಗಿದೆ. *ಲ್ಯಾಂಡರ್‌ನ ವೇಗ ನಿಯಂತ್ರಣವೇ ಇಳಿಸುವ ಪ್ರಕ್ರಿಯೆಯ ಅತಿ ಮುಖ್ಯ ಅಂಶ. ವೇಗ ನಿಯಂತ್ರಿಸುವಾಗ ಲ್ಯಾಂಡರ್‌ ಬೀಳುವ ಸಂದರ್ಭದಲ್ಲಿ ಎಷ್ಟು ಎತ್ತರದಲ್ಲಿದೆ ವೇಗ ಎಷ್ಟಿದೆ ತಿರುಗುತ್ತಾ ಬೀಳುತ್ತಿದೆಯೇ ಅಥವಾ ಗಿರಗಿಟ್ಲೆಯಂತೆ ತಿರುಗುತ್ತಿದೆಯೆ ಎಂಬುದನ್ನು ಕ್ಷಣ ಮಾತ್ರದಲ್ಲಿ ಗ್ರಹಿಸಿ ಅದನ್ನು ಸರಿಪಡಿಸಿಕೊಳ್ಳುತ್ತದೆ. *ಇದರಲ್ಲಿ ತಂತ್ರಾಂಶವನ್ನು ಬದಲಿಸಲಾಗಿದೆ. ವೈಫಲ್ಯಗಳನ್ನೇ ಗಮನದಲ್ಲಿಟ್ಟುಕೊಂಡು ಅವುಗಳಿಗೆ ಪರಿಹಾರ ನಿಟ್ಟಿನಲ್ಲಿ ಈ ತಂತ್ರಾಂಶ ರೂಪಿಸಲಾಗಿದೆ.

ಸೂರ್ಯನ ಬೆಳಕಿನಲ್ಲೇ ಸ್ಪರ್ಶ

ಚಂದ್ರನ ದಕ್ಷಿಣ ಧ್ರುವದಲ್ಲಿ ಪರ್ವತಗಳಿಂದಾಗಿ ಸಾಕಷ್ಟು ಕಡೆಗಳಲ್ಲಿ ನೆರಳಿರುತ್ತದೆ. ಆದರೆ ಇಸ್ರೊ ಲ್ಯಾಂಡರ್‌ ಇಳಿಕೆಗೆ ಆಯ್ಕೆ ಮಾಡಿರುವ ಪ್ರದೇಶದಲ್ಲಿ ಉತ್ತಮ ಬೆಳಕು ಇರುತ್ತದೆ. ಅಲ್ಲಿ ಸೂರ್ಯೋದಯದ ಬಳಿಕವೇ ಲ್ಯಾಂಡಿಂಗ್‌ ಪ್ರಕ್ರಿಯೆ ಆರಂಭವಾಗುತ್ತದೆ. ಭೂಮಿಯ 14 ದಿನಗಳು ಅಂದರೆ ಚಂದ್ರನ 1 ದಿನ ಪೂರ್ತಿ ಅಲ್ಲಿ ಬೆಳಕು ಇರುತ್ತದೆ. ಇದೇ ವಾತಾವರಣದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತದೆ. ಇದೇ ಕಾರಣಕ್ಕಾಗಿ ದಕ್ಷಿಣ ಪ್ರದೇಶದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್‌ ಇಳಿಸಲಾಗುತ್ತಿದೆ ಎನ್ನುತ್ತಾರೆ ಇಸ್ರೊ ವಿಜ್ಞಾನಿಗಳು.

ಪ್ರತಿಕೂಲ ಪರಿಸ್ಥಿತಿ ಇದ್ದರೆ ಆ.27 ಕ್ಕೆ ಚಂದ್ರಸ್ಪರ್ಶಕ್ಕೆ ಕೊನೆಯ ಎರಡು ಗಂಟೆಗಳು ಅತಿ ಮುಖ್ಯ. ಒಂದು ವೇಳೆ ಚಂದ್ರನ ಆವರಣದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದರೆ ಲ್ಯಾಂಡಿಂಗ್‌ ಅನ್ನು ಆಗಸ್ಟ್‌ 27 ಕ್ಕೆ ಮುಂದೂಡುವ ಸಾಧ್ಯತೆ ಇದೆ. ಸದ್ಯಕ್ಕಂತೂ ಅಂತಹ ವಾತಾವರಣವಿಲ್ಲ ಎಂದು ಮೂಲಗಳು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT