ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಪರಿಸ್ಥಿತಿಯೇ ನಮಗೂ ಬರುತ್ತದೆ: ಫಾರೂಕ್‌ ಅಬ್ದುಲ್ಲಾ

ಮಾತುಕತೆ ಮೂಲಕ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿಗೆ ಫಾರೂಕ್‌ ಸಲಹೆ
Published 26 ಡಿಸೆಂಬರ್ 2023, 14:29 IST
Last Updated 26 ಡಿಸೆಂಬರ್ 2023, 14:29 IST
ಅಕ್ಷರ ಗಾತ್ರ

ಶ್ರೀನಗರ: ‘ಬಿಕ್ಕಟ್ಟು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಪಾಕಿಸ್ತಾನದ ಜೊತೆ ಮಾತುಕತೆ ಆರಂಭಿಸದಿದ್ದರೆ ಗಾಜಾ, ಪ್ಯಾಲೆಸ್ಟೀನ್‌ಗಾದ ಸ್ಥಿತಿಯೇ ಕಾಶ್ಮೀರಕ್ಕೂ ಆಗುತ್ತದೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಮಂಗಳವಾರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಕಳೆದ ವಾರ ಸೇನೆಯ ನಾಲ್ವರು ಸಿಬ್ಬಂದಿಯನ್ನು ಉಗ್ರರು ಹತ್ಯೆಗೈದ ಪ್ರಕರಣ ಮತ್ತು ಆ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಬ್ದುಲ್ಲಾ ಅವರು ಸುದ್ದಿಗಾರರ ಜತೆ ಮಾತನಾಡಿದರು. 

‘ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು. ಆದರೆ ನೆರೆಹೊರೆಯವರನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಅವರು ಮಾತನಾಡಿದರು. ‘ನೆರೆಯವರ ಜೊತೆ ಸ್ನೇಹದಿಂದ ಇದ್ದರೆ ಎರಡೂ ದೇಶಗಳೂ (ಭಾರತ, ಪಾಕಿಸ್ತಾನ) ಏಳಿಗೆಯಾಗಬಹುದು. ಶತ್ರುತ್ವ ಮುಂದುವರೆಸಿದರೆ ಏಳಿಗೆ ಸಾಧ್ಯವಿಲ್ಲ’ ಎಂದರು.

‘ನಮ್ಮೆದುರು ಯುದ್ಧದ ಆಯ್ಕೆ ಇಲ್ಲ. ಏನಿದ್ದರೂ ಸಮಾಲೋಚನೆ ಮೂಲಕವೇ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಹೇಳಿದ್ದರು. ಆದರೆ ಸಮಾಲೋಚನೆ ಯಾಕೆ ನಡೆಯುತ್ತಿಲ್ಲ’ ಎಂದು ಫಾರೂಕ್‌ ಪ್ರಶ್ನಿಸಿದರು.

ಈಗ ನವಾಜ್‌ ಷರೀಫ್‌ ಅವರು ಪಾಕಿಸ್ತಾನದ ಪ್ರಧಾನಿ ಆಗಲಿದ್ದಾರೆ. ಭಾರತದ ಜೊತೆ ಮಾತುಕತೆಗೆ ತಯಾರಿರುವುದಾಗಿ ಅವರು ಹೇಳುತ್ತಲೇ ಬಂದಿದ್ದಾರೆ. ಆದರೆ ಭಾರತವೇಕೆ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ಪ್ರಶ್ನಿಸಿದರು.

ವಿಚಾರಣೆಗಾಗಿ ಸೇನಾ ಸಿಬ್ಬಂದಿ ಕರೆದೊಯ್ದಿದ್ದ ಮೂವರು ನಾಗರಿಕರು ಸಾವಿಗೀಡಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು,  ‘ಶಾಂತಿಯುತವಾಗಿ ಬದುಕುತ್ತಿದ್ದ ಎಂಟು ಜನರನ್ನು ಸೇನಾ ಸಿಬ್ಬಂದಿ ವಿಚಾರಣೆಗಾಗಿ ಕರೆದೊಯ್ದಿದ್ದರು. ಅವರಲ್ಲಿ ಮೂವರನ್ನು ಮನಬಂದಂತೆ ಹಿಂಸಿಸಿ ಹತ್ಯೆಗೈಯಲಾಗಿದೆ. ಇನ್ನೂ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು ಯಾವ ಭಾರತದಲ್ಲಿ ಇದ್ದೇವೆ? ಇದು ಮಹಾತ್ಮಾ ಗಾಂಧಿ ಅವರ ಭಾರತವೇ? ದ್ವೇಷ ಎಷ್ಟು ವ್ಯಾಪಕವಾಗಿ ಹರಡಿದೆ ಎಂದರೆ ಹಿಂದೂ ಮತ್ತು ಮುಸ್ಲಿಮರು ಪರಸ್ಪರರನ್ನು ವೈರಿಗಳೆಂದು ತಿಳಿದಿದ್ದಾರೆ’ ಎಂದರು.

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಿಂದ ಬಿಡುಗಡೆ ಆಗುವುದರಿಂದ ಪರಿಸ್ಥಿತಿ ಸುಧಾರಿಸಬಹುದೇ ಎಂಬ ಪ್ರಶ್ನೆಗೆ, ಇಮ್ರಾನ್‌ ಬಿಡುಗಡೆ ಸ್ವಾಗತಾರ್ಹ ವಿಷಯ. ಅವರನ್ನು ಕೊಲ್ಲದೇ ಉಳಿಸಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ, ಪಾಕಿಸ್ತಾನಿಯರ ಒಳಿತಿಗಾಗಿ ಕೆಲಸ ಮಾಡುವಂತಾಗಲಿ ಎಂದರು.

ಭಯೋತ್ಪಾದನೆ ಹೆಚ್ಚಳ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ನಾಲ್ಕು ವರ್ಷಗಳ ಕೆಳಗೆ ರದ್ದುಗೊಳಿಸುವ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ವಿಶೇಷ ಸ್ಥಾನಮಾನದ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಲ್ಲುತ್ತದೆ’ ಎಂದಿದ್ದರು. ತಾವು ಹಾಗೆ ಹೇಳಿಯೇ ಇಲ್ಲ ಎಂದು ಈಚೆಗೆ ಸಂಸತ್ತಿನಲ್ಲಿ ಭಾಷಣ ಮಾಡುವ ವೇಳೆ  ಹೇಳಿದರು. ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಇಲ್ಲಿ ಭಯೋತ್ಪಾದನೆ ಮತ್ತಷ್ಟು ಹೆಚ್ಚಾಗಿದೆ ಎಂದರು. 

ಸೇನಾಧಿಕಾರಿಗಳನ್ನು ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಳ್ಳುವುದು ಪೂಂಛ್‌ ನಾಗರಿಕರ ಸಾವಿಗೆ ಪರಿಹಾರವಲ್ಲ. ಈ ನಿಟ್ಟಿನಲ್ಲಿ ತನಿಖೆ ಮಾಡಬೇಕು 

-ಫಾರೂಕ್‌ ಅಬ್ದುಲ್ಲಾ ಎನ್‌ಸಿ ಅಧ್ಯಕ್ಷ

ಫಾರೂಕ್‌ ಹೇಳಿಕೆ ವಿಷಾದಕರ: ಬಿಜೆಪಿ

ಬಿಜೆಪಿ ಹಿರಿಯ ನಾಯಕಿ ಡಾ. ಹೀನಾ ಶಫೀ ಭಟ್‌ ಅವರು ಫಾರೂಕ್‌ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪಾಕಿಸ್ತಾನದ ಜೊತೆ ಭಾರತ ಮಾತುಕತೆ ಕೈಗೊಳ್ಳಬೇಕು ಎಂದು ಫಾರೂಕ್‌ ಅವರು ಈಗಲೂ ಪ್ರತಿಪಾದಿಸುತ್ತಿರುವುದು ವಿಷಾದನೀಯ. ಮೋದಿ ಅವರ ನೇತೃತ್ವದ ಸರ್ಕಾರವು ಪಾಕಿಸ್ತಾನದ ಎದುರು ತಲೆ ಬಾಗಿಸುವುದಿಲ್ಲ ಎಂದಿದ್ದಾರೆ. ‘ಈ ಹಿಂದೆ ನಾವು ಮಾತುಕತೆ ನಡೆಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ಮತ್ತೆಮತ್ತೆ ಬೆನ್ನಿಗೆ ಚೂರಿ ಹಾಕಿದರು’ ಎಂದಿದ್ದಾರೆ.  ‘ಪಾಕಿಸ್ತಾನದ ಜೊತೆ ಸೌಹಾರ್ದಯುತವಾದ ಸಂಬಂಧ ಹೊಂದಲು ಭಾರತ ಬಯಸುತ್ತದೆ. ಆದರೆ ಅಂಥ ಸಂಬಂಧವನ್ನು ಹೊಂದಲು ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣ ಇರಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅರಿಂದಾಮ್‌ ಬಾಗ್ಚಿ ಅವರು ಫಾರೂಕ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT