ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ಸಂಪೂರ್ಣ ನಿಷೇಧ: ಕೇಂದ್ರಕ್ಕೆ ನಿರ್ದೇಶಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

Published 1 ಆಗಸ್ಟ್ 2023, 5:14 IST
Last Updated 1 ಆಗಸ್ಟ್ 2023, 5:14 IST
ಅಕ್ಷರ ಗಾತ್ರ

ನವದೆಹಲಿ: ಗೋವು ಮತ್ತು ಅದರ ಸಂತತಿಯ ಹತ್ಯೆಯನ್ನು ಸಂಪೂರ್ಣ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಈ ವಿಚಾರದಲ್ಲಿ ಸಂಬಂಧಿತ ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಬೃಷ್ಭನ್ ವರ್ಮಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಅವರ ನೇತೃತ್ವದ ಪೀಠವು, ರಾಷ್ಟ್ರ ರಾಜಧಾನಿಯಲ್ಲಿ ಗೋಹತ್ಯೆಗೆ ನಿಷೇಧ ಹೇರಿರುವ ಕಾನೂನು ಅನ್ನು ಇಲ್ಲಿನ ಸರ್ಕಾರವು ಜಾರಿಗೆ ತಂದಿದೆ ಎಂಬುದರತ್ತ ಗಮನ ಸೆಳೆಯಿತು.  

ಇತರ ರಾಜ್ಯಗಳಿಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಅರ್ಜಿದಾರರಿಗೆ ಸ್ವಾತಂತ್ರ್ಯ ಇದೆ. ನಿರ್ದಿಷ್ಟ ಕಾನೂನು ಜಾರಿಗೆ ತರುವಂತೆ ಶಾಸಕಾಂಗಕ್ಕೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜೀವ್‌ ನರುಲಾ ಅವರೂ ಇದ್ದ ಪೀಠ ಹೇಳಿದೆ.

‘ಇಂಥ ತೀರ್ಮಾನಗಳನ್ನು ಶಾಸಕಾಂಗ ಮಾತ್ರ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್, ನಿರ್ದಿಷ್ಟ ಕಾನೂನು ರೂಪಿಸಲು ಶಾಸಕಾಂಗವನ್ನು ಒತ್ತಾಯಿಸಲು ಸಾಧ್ಯವಿಲ್ಲವೆಂದು ಹೇಳಿದೆ. ಅಂತಿಮವಾಗಿ ಶಾಸಕಾಂಗವನ್ನು ಸಂಪರ್ಕಿಸಲು ಪ್ರಕರಣದ ಮೇಲ್ಮನವಿದಾರರಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿದೆ’ ಎಂದು ಪೀಠವು ಕಳೆದ ವಾರ ಹೊರಡಿಸಿದ ಆದೇಶದಲ್ಲಿ ಹೇಳಿದೆ. 

ಅರುಣಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಈ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಹೊರತುಪಡಿಸಿ, ಉಳಿದೆಡೆ ಗೋವು ಮತ್ತು ಅದರ ಸಂತತಿಯ ಹತ್ಯೆ ನಿರ್ಬಂಧಿಸಲು/ನಿಷೇಧಿಸಲು ಕಾನೂನುಗಳು ಜಾರಿಯಲ್ಲಿವೆ ಎಂಬುದನ್ನು ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ವಕೀಲೆ ಮೋನಿಕಾ ಅರೋರಾ ಅವರು ಪೀಠದ ಗಮನಕ್ಕೆ ತಂದರು.

ದೆಹಲಿ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಸಂತೋಷ್ ಕುಮಾರ್ ತ್ರಿಪಾಠಿ, ರಾಷ್ಟ್ರ ರಾಜಧಾನಿಯಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಕಾನೂನು ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT