ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ ನಿಲ್ಲಿಸುವುದಿಲ್ಲ: ಸಲ್ಮಾನ್‌ ಖುರ್ಷೀದ್‌

'ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ'
Last Updated 22 ಡಿಸೆಂಬರ್ 2022, 11:13 IST
ಅಕ್ಷರ ಗಾತ್ರ

ಲಖನೌ: ಪಕ್ಷವು ಕೋವಿಡ್‌–19ಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತದೆ. ಆದರೆ, ಯಾವುದೇ ಕಾರಣಕ್ಕೂ ಭಾರತ್‌ ಜೋಡೊ ಯಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌ ಗುರುವಾರ ಹೇಳಿದ್ದಾರೆ.

‘ಪಕ್ಷ ಕೈಗೊಂಡಿರುವ ಈ ಯಾತ್ರೆಯಿಂದ ಕೇಂದ್ರ ಸರ್ಕಾರ ಹೆದರಿದೆ. ಈ ಕಾರಣಕ್ಕಾಗಿಯೇ ಅದು ವಿವಿಧ ಆದೇಶಗಳು, ಪತ್ರಗಳನ್ನು ರವಾನಿಸುತ್ತಿದೆ’ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಆಗದಿದ್ದರೆ ಭಾರತ್‌ ಜೋಡೊ ಯಾತ್ರೆಯನ್ನು ಸ್ಥಗಿತಗೊಳಿಸಲು ಪರಿಗಣಿಸಬೇಕು’ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಪಕ್ಷದ ಮುಖಂಡ ರಾಹುಲ್‌ ಗಾಂಧಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಲ್ಮಾನ್‌ ಖುರ್ಷೀದ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಯಾತ್ರೆಯು ಜ.3ರಂದು ಗಾಜಿಯಾಬಾದ್‌ನ ಲೋನಿ ಪ್ರದೇಶದಿಂದ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ನಂತರ, ಬಾಗಪತ್‌ ಹಾಗೂ ಶಾಮ್ಲಿ ಮೂಲಕ ಹರಿಯಾಣ ಪ್ರವೇಶಿಸುವುದು’ ಎಂದರು.

ಪ್ರಧಾನಿ ಸಭೆಯ ಸಂದರ್ಭ ಅರ್ಥ ಮಾಡಿಕೊಳ್ಳಿ: ಕಾಂಗ್ರೆಸ್‌ ಟೀಕೆ

ನವದೆಹಲಿ: ‘ಕೋವಿಡ್‌ ಬಗ್ಗೆ ಆತಂಕ ವ್ಯಕ್ತಪಡಿಸಿ ಕೇಂದ್ರ ಆರೋಗ್ಯ ಸಚಿವರು ರಾಹುಲ್‌ ಗಾಂಧಿಗೆ ಪತ್ರ ಬರೆಯುತ್ತಾರೆ. ಇನ್ನು, ಭಾರತ್‌ ಜೋಡೊ ಯಾತ್ರೆ ದೆಹಲಿ ಪ್ರವೇಶಿಸುವುದಕ್ಕೂ ಕೆಲದಿನ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಪರಿಸ್ಥಿತಿ ಕುರಿತು ಸಭೆ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಗುರುವಾರ ಟೀಕಿಸಿದೆ.

‘ಪತ್ರ ಬರೆದಿರುವ ಹಾಗೂ ಪ್ರಧಾನಿ ಸಭೆ ನಡೆಸುತ್ತಿರುವ ಸಮಯವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

‘ಓಮೈಕ್ರಾನ್‌ನ ಉಪತಳಿ ಸೋಂಕಿನ ನಾಲ್ಕು ಪ್ರಕರಣಗಳು ಗುಜರಾತ್‌, ಒಡಿಶಾದಲ್ಲಿ ಕ್ರಮವಾಗಿ ಕಳೆದ ಜುಲೈ, ಸೆಪ್ಟೆಂಬರ್‌ ಹಾಗೂ ನವೆಂಬರ್‌ನಲ್ಲಿ ವರದಿಯಾಗಿವೆ’.

‘ಆರೋಗ್ಯ ಸಚಿವರು ರಾಹುಲ್‌ ಗಾಂಧಿ ಅವರಿಗೆ ನಿನ್ನೆ ಪತ್ರ ಬರೆದಿದ್ದಾರೆ. ಕೋವಿಡ್‌ ಪರಿಸ್ಥಿತಿ ಕುರಿತು ಪ್ರಧಾನಿ ಗುರುವಾರ ಪರಿಶೀಲನಾ ಸಭೆ ನಡೆಸುವರು. ಮಾರನೇ ದಿನ ಭಾರತ್‌ ಜೋಡೊ ಯಾತ್ರೆ ದೆಹಲಿಯನ್ನು ಪ್ರವೇಶಿಸಲಿದೆ. ಈಗ ನೀವು ಈ ಕಾಲಾನುಕ್ರಮವನ್ನು ಅರ್ಥ ಮಾಡಿಕೊಳ್ಳಿ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಜನ ಆಕ್ರೋಶ ಯಾತ್ರೆ’ ರದ್ದುಗೊಳಿಸಿದ ಬಿಜೆಪಿ

ನವದೆಹಲಿ: ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜಸ್ಥಾನದಲ್ಲಿ ಪಕ್ಷವು ಹಮ್ಮಿಕೊಂಡಿರುವ ‘ಜನ ಆಕ್ರೋಶ ಯಾತ್ರೆ’ಯನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಗುರುವಾರ ಹೇಳಿದ್ದಾರೆ.

‘ಬಿಜೆಪಿಗೆ ರಾಜಕಾರಣಕ್ಕಿಂತ ಜನರ ಸುರಕ್ಷತೆ, ಆರೋಗ್ಯ ಮುಖ್ಯ. ಹೀಗಾಗಿ, ಯಾತ್ರೆಯನ್ನು ರದ್ದು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT