ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಭೇಟಿಗೆ ಅನುಮತಿ ಕೋರಿದ ಕೇಜ್ರಿವಾಲ್: ED ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

Published 16 ಏಪ್ರಿಲ್ 2024, 12:19 IST
Last Updated 16 ಏಪ್ರಿಲ್ 2024, 12:19 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಿಯಮಿತವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅನುಮತಿ ಕೋರಿದ್ದು, ಈ ಕುರಿತು ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ED) ದೆಹಲಿ ನ್ಯಾಯಾಲಯ ಮಂಗಳವಾರ ನಿರ್ದೇಶಿಸಿದೆ.

‘ರಕ್ತದಲ್ಲಿನ ಸಕ್ಕರೆ ಅಂಶ ಅನಿಯಂತ್ರಿತವಾಗಿದೆ. ಈ ಕುರಿತು ತಮ್ಮ ವೈದ್ಯರೊಂದಿಗೆ ನಿರಂತರ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಕೇಜ್ರಿವಾಲ್ ಅವರು ವಿಶೇಷ ನ್ಯಾಯಾಧೀಶ ರಾಕೇಶ್ ಸ್ಯಾಲ್ ಅವರ ಬಳಿ ಕೋರಿದರು.

ಈ ಕುರಿತು ಏ. 18ರೊಳಗೆ ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಧೀಶರು ನಿರ್ದೇಶಿಸಿದರು. ಆದರೆ ಕೇಜ್ರಿವಾಲ್ ಮನವಿಗೆ ಆಕ್ಷೇಪ ವ್ಯಕ್ತಪಡಿಸಿರುವ ED ಪರ ವಕೀಲರು, ‘ಇಂಥ ಆರೋಗ್ಯ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡಲು ಜೈಲಿನೊಳಗೆ ಎಲ್ಲಾ ರೀತಿಯ ಸೌಕರ್ಯಗಳಿವೆ. ಅಲ್ಲಿಯೇ ಹೋಗಿ ಅವರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು’ ಎಂದಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಜ್ರಿವಾಲ್ ಪರ ವಕೀಲರು, ‘ತಮ್ಮ ಆರೋಗ್ಯ ಕಾಳಜಿಯನ್ನು ಅವರೇ ವಹಿಸಿಕೊಳ್ಳಬೇಕೆಂದಿರುವಾಗ ಜಾರಿ ನಿರ್ದೇಶನಾಲಯ ಏಕೆ ವಿರೋಧಿಸುತ್ತಿದೆ’ ಎಂದು ಪ್ರಶ್ನಿಸಿದರು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಸೋಮವಾರ ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ನ್ಯಾಯಾಂಗ ಬಂಧನದ ಅವಧಿಯನ್ನು ಏ. 23ರವರೆಗೆ ವಿಸ್ತರಿಸಿ ಆದೇಶಿಸಿದೆ. ಸದ್ಯ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದಾರೆ.

‘ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಿಕ್‌ಬ್ಯಾಕ್ ರೂಪದಲ್ಲಿ ಸಾಕಷ್ಟು ಹಣ ಪಡೆದು ಅಬಕಾರಿ ನೀತಿ ರೂಪಿಸಲಾಗಿದೆ. ಈ ಇಡೀ ಪ್ರಕ್ರಿಯೆಯು ಅರವಿಂದ ಕೇಜ್ರಿವಾಲ್ ಅವರ ಆಜ್ಞೆಯಂತೆಯೇ ನಡೆದಿದೆ. ಹೀಗೆ ಪಡೆದ ಕಿಕ್‌ಬ್ಯಾಕ್‌ನ ಸ್ವಲ್ಪ ಭಾಗವನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT