ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿಕಾ ಡೀಪ್‌ಫೇಕ್‌ ವಿಡಿಯೊ: ಆರೋಪಿ ಬಂಧನ

ಗುಂಟೂರಿನ ಆರೋಪಿ ಬಿ.ಟೆಕ್‌ ಪದವೀಧರ * ಫಾಲೋವರ್ ಸಂಖ್ಯೆ ಹೆಚ್ಚಿಸಲು ಕೃತ್ಯ
Published 20 ಜನವರಿ 2024, 22:24 IST
Last Updated 20 ಜನವರಿ 2024, 22:24 IST
ಅಕ್ಷರ ಗಾತ್ರ

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ಸೃಷ್ಟಿಸಿದ ಆರೋಪದ ಮೇರೆಗೆ ಆಂಧ್ರ ಪ್ರದೇಶದ 24 ವರ್ಷದ ಬಿ.ಟೆಕ್‌ ಪದವೀಧರನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗುಂಟೂರಿನ ಈಮನಿ ನವೀನ್‌ ಎಂಬಾತ ಬಂಧಿತನಾಗಿದ್ದು, ರಶ್ಮಿಕಾ ಅವರ ಫ್ಯಾನ್‌ಪೇಜ್‌ನ ಫಾಲೋವರ್‌ಗಳ ಸಂಖ್ಯೆ ಹೆಚ್ಚಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ ಚಾನೆಲ್‌ಗಳ ಪ್ರಚಾರದಂತಹ ಸೇವೆಗಳನ್ನು ಒದಗಿಸುವ ಕೆಲಸವನ್ನು ಮನೆಯಿಂದಲೇ ನಿರ್ವಹಿಸುತ್ತಿದ್ದ ಈಮನಿ ನವೀನ್‌, ಡೀಪ್‌ಫೇಕ್‌ ವಿಡಿಯೊ ಪ್ರಕರಣ ದಾಖಲಾದ ಮೂರು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬ್ರಿಟನ್‌ನ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ನಲ್ಲಿ ಬ್ರಿಟಿಷ್‌– ಭಾರತೀಯ ಯುವತಿಯೊಬ್ಬರು ಕಳೆದ ವರ್ಷದ ಅಕ್ಟೋಬರ್‌ 9ರಂದು ತಮ್ಮ ವಿಡಿಯೊ ಹಂಚಿಕೊಂಡಿದ್ದರು. ಈ ಮೂಲ ವಿಡಿಯೊಗೆ ರಶ್ಮಿಕಾ ಅವರ ಮುಖವನ್ನು ಜೋಡಿಸಿ ಡೀಪ್‌ಫೇಕ್‌ ವಿಡಿಯೊ ತಯಾರಿಸಿದ ಆರೋಪಿ‌, ಮೂರು ದಿನಗಳ ಬಳಿಕ ಅದನ್ನು ಇನ್‌ಸ್ಟಾಗ್ರಾಮ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಟಿಯ ಅಭಿಮಾನಿ:

‘ಆರೋಪಿ ನವೀನ್‌, ನಟಿ ರಶ್ಮಿಕಾ ಅವರ ದೊಡ್ಡ ಅಭಿಮಾನಿ. ಈತ ಮೂವರು ಸೆಲೆಬ್ರಿಟಿಗಳ ಫ್ಯಾನ್‌ಪೇಜ್‌ಗಳನ್ನು ನಡೆಸುತ್ತಿದ್ದಾನೆ. ಡೀಪ್‌ಫೇಕ್‌ ವಿಡಿಯೊ ಅಪ್ಲೋಡ್‌ ಮಾಡುವುದಕ್ಕೂ ಮುನ್ನ ಈತ ಮೂಲ ವಿಡಿಯೊಗಳನ್ನೇ ಅಪ್ಲೋಡ್‌ ಮಾಡಿದ್ದಾನೆ’ ಎಂದು ದೆಹಲಿಯ ಡಿಸಿಪಿ (ವಿಶೇಷ ಘಟಕ–ಗುಪ್ತಚರ) ಹೇಮಂತ್‌ ತಿವಾರಿ ಮಾಹಿತಿ ನೀಡಿದರು.

‘ತಾನು ನಡೆಸುತ್ತಿದ್ದ ಸೆಲೆಬ್ರಿಟಿಗಳ ಫ್ಯಾನ್‌ಪೇಜ್‌ಗಳ ಪೈಕಿ ಇಬ್ಬರು ನಟಿಯರದ್ದಕ್ಕೆ ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಆದರೆ, ರಶ್ಮಿಕಾ ಅವರ ಫಾಲೋವರ್ ಸಂಖ್ಯೆ 90 ಸಾವಿರ ಇತ್ತು. ಹೀಗಾಗಿ ರಶ್ಮಿಕಾ ಅವರ ಫ್ಯಾನ್‌ಪೇಜ್‌ನ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಆತ ಈ ಕೃತ್ಯ ಎಸಗಿದ್ದಾನೆ‘ ಎಂದು ಅವರು ಹೇಳಿದರು.

‘ನಟಿಯ ಡೀಪ್‌ಫೇಕ್‌ ವಿಡಿಯೊ ಅನ್ನು ಈತ ಅಕ್ಟೋಬರ್‌ 13ರಂದು ಅಪ್ಲೋಡ್‌ ಮಾಡಿದ್ದ. ಆದಾದ ಎರಡು ವಾರಗಳಲ್ಲಿಯೇ ಈ ಫ್ಯಾನ್‌ಪೇಜ್‌ನ ಫಾಲೋವರ್‌ ಸಂಖ್ಯೆ 90 ಸಾವಿರದಿಂದ 1.08 ಲಕ್ಷಕ್ಕೆ ಏರಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ಡೀಪ್‌ಫೇಕ್‌ ವಿಡಿಯೊ ಕುರಿತ ವಿವಾದ ರಾಷ್ಟ್ರಮಟ್ಟದಲ್ಲಿ ಧ್ವನಿಸಿ, ಪ್ರಸಿದ್ಧ ನಟರು, ಖ್ಯಾತನಾಮರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ವ್ಯಕ್ತಪಡಿಸಿದ ಬಳಿಕ ಆತಂಕಕ್ಕೆ ಒಳಗಾದ ಆರೋಪಿ ನವೀನ್‌, ತನ್ನ ಇನ್‌ಸ್ಟಾಗ್ರಾಮ್‌ ಚಾನೆಲ್‌ನ ಪೋಸ್ಟ್‌ಗಳನ್ನು ಅಳಿಸಿದ ಹಾಗೂ ಚಾನೆಲ್‌ ಹೆಸರನ್ನು ಬದಲಿಸಿದ. ಅಲ್ಲದೆ ತನ್ನ ಡಿವೈಸ್‌ನಲ್ಲಿದ್ದ ಡಿಜಿಟಲ್‌ ದತ್ತಾಂಶವನ್ನೂ ಅಳಿಸಿಹಾಕಿದ್ದಾನೆ’ ಎಂದು ಅವರು ವಿವರಿಸಿದರು.

500ಕ್ಕೂ ಹೆಚ್ಚು ಖಾತೆಗಳ ಪರಿಶೀಲನೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಾಮಾಜಿಕ ಮಾಧ್ಯಮಗಳ 500ಕ್ಕೂ ಹೆಚ್ಚು ಖಾತೆಗಳನ್ನು ಪರಿಶೀಲಿಸಿ, ಹಲವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ನವೀನ್‌ ಅವರನ್ನು ಬಂಧಿಸಿದ್ದಾರೆ.

ಚೆನ್ನೈನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಟೆಕ್‌ ಪದವಿ ಪಡೆದಿರುವ ಈತ ಗೂಗಲ್‌ ಗ್ಯಾರೇಜ್‌ನಿಂದ ಡಿಜಿಟಲ್‌ ಮಾರ್ಕೆಂಟಿಂಗ್‌ ಕೋರ್ಸ್‌ ಅನ್ನು ಪೂರ್ಣಗೊಳಿಸಿದ್ದಾನೆ. ಅಲ್ಲದೆ ವೆಬ್‌ಸೈಟ್‌ ಅಭಿವೃದ್ಧಿ, ಫೋಟೊಶಾಪ್‌, ವಿಡಿಯೊ ಎಡಿಟಿಂಗ್‌ ತರಬೇತಿಯನ್ನೂ ಪಡೆದಿದ್ದಾನೆ ಎಂದು ಪೊಲೀಸರು ವಿವರಿಸಿದರು. 

ಮೆಟಾಗೆ ಪತ್ರ

ಡೀಪ್‌ಫೇಕ್‌ ವಿಡಿಯೊ ಕುರಿತಂತೆ ದೆಹಲಿ ಪೊಲೀಸ್‌ನ ವಿಶೇಷ ಘಟಕವಾದ ಇಂಟೆಲಿಜೆನ್ಸ್‌ ಫ್ಯೂಷನ್‌ ಮತ್ತು ಸ್ಟ್ರಾಟೆಜಿಕ್‌ ಆಪರೇಷನ್‌ (ಐಎಫ್‌ಎಸ್‌ಒ) ನವೆಂಬರ್‌ 10ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 465 469 ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66ಸಿ ಮತ್ತು 66ಇ ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿತ್ತು. ವಿಡಿಯೊ ಸೃಷ್ಟಿಸಿದ ಖಾತೆದಾರರ ಯುಆರ್‌ಎಲ್‌ ಐಡಿ ವಿವರಗಳನ್ನು ನೀಡುವಂತೆ ಅದು ಮೆಟಾಗೆ ಪತ್ರ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT