ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ದೆಹಲಿ: ಕನಿಷ್ಠ 57 ಕಾರ್ಯಕರ್ತರು ಪೊಲೀಸ್‌ ವಶಕ್ಕೆ
Published 26 ಮಾರ್ಚ್ 2024, 12:40 IST
Last Updated 26 ಮಾರ್ಚ್ 2024, 12:40 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್‌ ಸೇರಿದಂತೆ ಕನಿಷ್ಠ 57 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮುನ್ನ, ಫಿರೋಜ್‌ಶಾ ಕೋಟ್ಲಾ ಸ್ಟೇಡಿಯಂ ಬಳಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ದೆಹಲಿ ಸಚಿವಾಲಯದತ್ತ ಮೆರವಣಿಗೆ ಆರಂಭಿಸಿದರು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ‘ಕೇಜ್ರಿವಾಲ್‌ ಶರಮ್‌ ಕರೋ’ ಹಾಗೂ ‘ಕೇಜ್ರಿವಾಲ್ ಇಸ್ತಿಫಾ ದೋ’ ಎಂಬ ಘೋಷಣೆಗಳನ್ನು ಕೂಗಿದರು.

‘ಸಚಿವಾಲಯ ಬಳಿ ಅಳವಡಿಸಿದ್ದ ತಡೆಗೋಡೆಗಳನ್ನು ತೆಗೆದು ಹಾಕಲು ಪ್ರತಿಭಟನಕಾರರು ಯತ್ನಿಸಿದರು. ಕೆಲವರು ಅವುಗಳ ಮೇಲೆ ಹತ್ತಿ, ಪ್ರತಿಭಟಿಸಿದರು. ಜಲಫಿರಂಗಿ ಬಳಸಿ ಕೆಲವರನ್ನು ಚದುರಿಸಲಾಯಿತಲ್ಲದೇ, ಹಲವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಕಾರ್ಯ‌ಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಹರ್ಷವರ್ಧನ್, ‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನಕ್ಕೆ ಒಳಗಾಗಿದ್ದು, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ತಮ್ಮ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್‌ ಸಿಂಗ್‌ ಸಿರ್ಸಾ,‘ಒಬ್ಬ ಮುಖ್ಯಮಂತ್ರಿ ಜಾರಿ ನಿರ್ದೇಶನಾಲಯದ ವಶದಲ್ಲಿದ್ದುಕೊಂಡು ನಿರ್ದೇಶನಗಳನ್ನು ನೀಡುವಂತಿಲ್ಲ. ಇಂತಹ ನಡೆಗಳ ಮೂಲಕ ಎಎಪಿ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ’ ಎಂದು ಟೀಕಿಸಿದರು.

ಮತ್ತೊಬ್ಬ ಸಂಸದ ಮನೋಜ್‌ ತಿವಾರಿ,‘ಜೈಲಿನಿಂದ ನೀವು ಒಂದು ಗ್ಯಾಂಗ್‌ ಅನ್ನು ಮುನ್ನಡೆಸಬಹುದೇ ಹೊರತು ಒಂದು ಸರ್ಕಾರವನ್ನಲ್ಲ. ಒಂದು ಸರ್ಕಾರ ಸಂವಿಧಾನದ ಪ್ರಕಾರ ಮಾತ್ರ ಕಾರ್ಯ ನಿರ್ವಹಿಸುತ್ತದೆ’ ಎಂದರು.

ಇ.ಡಿ ವಶದಲ್ಲಿರುವ ಅರವಿಂದ ಕೇಜ್ರಿವಾಲ್‌ ನಿರ್ದೇಶನಗಳನ್ನ ನೀಡುವಂತಿಲ್ಲ. ಈ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ದೂರು ನೀಡಿದ್ದೇನೆ
ಮಂಜಿಂದರ್‌ ಸಿಂಗ್‌ ಸಿರ್ಸಾ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT