ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕೆಡವಲು ಶಾಸಕರಿಗೆ ತಲಾ ₹25 ಕೋಟಿ ಆಮಿಷ: BJP ವಿರುದ್ಧ ಕೇಜ್ರಿವಾಲ್ ಆರೋಪ

Published 21 ಫೆಬ್ರುವರಿ 2024, 14:19 IST
Last Updated 21 ಫೆಬ್ರುವರಿ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ‘ವಿರೋಧಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಸರ್ಕಾರಗಳನ್ನು ಉರುಳಿಸಲು ಆಡಳಿತಾರೂಢ ಪಕ್ಷದ ಶಾಸಕರಿಗೆ ತಲಾ ₹25 ಕೋಟಿ ಆಮಿಷವನ್ನು ಬಿಜೆಪಿ ಒಡ್ಡುತ್ತಿದೆ’ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಬುಧವಾರ ಆರೋಪಿಸಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೆಲವೊಮ್ಮೆ ಅಧರ್ಮ ಹೇಗೆ ತಾಂಡವವಾಡುತ್ತಿದೆ ಎಂದರೆ, ಈ ಸಮಾಜದಲ್ಲಿ ಸತ್ಯ ಹಾಗೂ ಪ್ರಾಮಾಣಿಕತೆಗೆ ಜಾಗವಿದೆಯೇ ಎಂದೆನಿಸುತ್ತದೆ. ಅಧರ್ಮದ ಪ್ರಭಾವದಿಂದಾಗಿ ರಾಜಕೀಯದಲ್ಲಿ ಉತ್ತಮರೂ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಧರ್ಮ ಸೃಷ್ಟಿಸುವ ಕೆಟ್ಟ ಹುಳುಗಳನ್ನು ದೇವರು ಸರಿಸಿ, ಪ್ರಾಮಾಣಿಕತೆ ಮತ್ತು ಸತ್ಯವನ್ನು ಮರುಸ್ಥಾಪಿಸಲಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

‘ದೆಹಲಿಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ವ್ಯಕ್ತಿಯನ್ನು (ಮನೀಶ್ ಸಿಸೋಡಿಯಾ) ಜೈಲಿನಲ್ಲಿಡಲಾಗಿದೆ. ಆದರೆ ನಮ್ಮ ಮನೆಯ ಮಕ್ಕಳು ಹಾಗೂ ಸಹೋದರಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ (ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್ ಸಿಂಗ್)ನನ್ನು ತನ್ನ ರಾಜಕೀಯ ಪ್ರಭಾವ ಬೀರಲು ಹೊರಗೆ ಇರುವಂತೆ ನೋಡಿಕೊಳ್ಳಲಾಗಿದೆ’ ಎಂದಿದ್ದಾರೆ.

'ದೆಹಲಿ ಸರ್ಕಾರ ಪತನಕ್ಕೂ ಯತ್ನಿಸಿದ್ದ ಬಿಜೆಪಿ ನಾಯಕರು, ಎಎಪಿ ಶಾಸಕರಿಗೆ ತಲಾ ₹25 ಕೋಟಿ ಆಮಿಷ ಒಡ್ಡಿದ್ದರು. ಇದು ದೆಹಲಿಯ ಸಮಸ್ಯೆ ಮಾತ್ರವಲ್ಲ, ದೇಶದಲ್ಲಿ ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳಿವೆಯೋ ಅಲ್ಲೆಲ್ಲಾ, ಇಂಥ ಯತ್ನವನ್ನು ಆ ಪಕ್ಷ ನಡೆಸುತ್ತಲೇ ಇದೆ’ ಎಂದು ಆರೋಪಿಸಿದ್ದಾರೆ.

‘ಹೀಗೆ ನೇರ ಆರೋಪ ಮಾಡಿದ್ದಕ್ಕೆ ನನಗೆ ಹಾಗೂ ಸಚಿವೆ ಅತಿಶಿಗೆ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್‌ನಿಂದ ಮನೆಗೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಇಂಥ ಬೆದರಿಕೆಗಳಿಗೆ ಬಗ್ಗುವುದಿಲ್ಲ’ ಎಂದು ಕೇಜ್ರಿವಾಲ್ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT