ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಕೇಜ್ರಿವಾಲ್‌ ಭೇಟಿ ಮಾಡಿದ ಸೌರಭ್‌

Published 24 ಏಪ್ರಿಲ್ 2024, 15:11 IST
Last Updated 24 ಏಪ್ರಿಲ್ 2024, 15:11 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ತಿಹಾರ್‌ ಜೈಲಿನಲ್ಲಿ ಬುಧವಾರ ಭೇಟಿಯಾದ ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಅವರು 30 ನಿಮಿಷ ಮಾತುಕತೆ ನಡೆಸಿದರು.

ಈ ವೇಳೆ ಕೇಜ್ರಿವಾಲ್ ಅವರು ತನ್ನ ಬಗ್ಗೆ ಚಿಂತಿಸಬೇಡಿ ಎಂದು ದೆಹಲಿ ಜನರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಮುಲಾಕಾತ್‌ ಜಂಗ್ಲಾ’ದಲ್ಲಿ ಕೇಜ್ರಿವಾಲ್‌ ಅವರನ್ನು ಭೇಟಿಯಾಗಿ, ಅವರೊಂದಿಗೆ ದೂರವಾಣಿಯಲ್ಲಿ ಅರ್ಧಗಂಟೆ ಸಂಭಾಷಣೆ ನಡೆಸಿದೆ. ತಾನು ಬಲಶಾಲಿಯಾಗಿದ್ದು, ದೆಹಲಿ ಜನರ ಆಶೀರ್ವಾದದೊಂದಿಗೆ ಹೋರಾಟ ಮುಂದುವರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಸೌರಭ್‌ ವಿವರಿಸಿದರು.

‘ಮುಲಾಕಾತ್‌ ಜಂಗ್ಲಾ’ ಎಂಬುದು ಕಬ್ಬಿಣ ಜಾಲರಿಯಾಗಿದ್ದು, ಜೈಲಿನೊಳಗಿನ ಕೊಠಡಿಯಲ್ಲಿ ಸಂದರ್ಶಕರಿಂದ ಕೈದಿಯನ್ನು ಪ್ರತ್ಯೇಕಿಸುತ್ತದೆ. ಸಂದರ್ಶಕ ಮತ್ತು ಕೈದಿ ಜಾಲರಿಯ ವಿವಿಧ ಬದಿಗಳಲ್ಲಿ ಕುಳಿತು ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾರ್ಚ್‌ 21ರಂದು ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಇದಕ್ಕೂ ಮುನ್ನಾ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್‌ ಪಾಠಕ್‌ ಅವರು ಏಪ್ರಿಲ್‌ 15ರಂದು ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್‌ ಅವರನ್ನು ಭೇಟಿಯಾಗಿದ್ದರು.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಪಾಠಕ್‌ ಅವರು, ಮುಖ್ಯಮಂತ್ರಿ ಅವರು ಪ್ರತಿ ವಾರ ಇಬ್ಬರು ಸಚಿವರನ್ನು ಭೇಟಿ ಮಾಡಿ, ಆಯಾ ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಾರೆ ಎಂದು ಹೇಳಿದ್ದರು. 

ಆತಿಶಿಗೆ ಸಿಗದ ಅವಕಾಶ

ನವದೆಹಲಿ: ಅರವಿಂದ ಕೇಜ್ರಿವಾಲ್‌ ಅವರೊಂದಿಗೆ ದೆಹಲಿ ಸಚಿವೆ ಆತಿಶಿ ಅವರು ಮಾತನಾಡುವ ಅವಕಾಶ ಕೋರಿದ್ದು ತಿಹಾರ್‌ ಜೈಲು ಆಡಳಿತವು ಕೊನೆ ಕ್ಷಣದಲ್ಲಿ ಅದನ್ನು ರದ್ದುಗೊಳಿಸಿದೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಬುಧವಾರ ಆರೋಪಿಸಿದರು.

‘ಬ್ರಿಟಿಷ್‌ ಆಡಳಿತ ಸಹ ಈ ರೀತಿಯ ನಡೆದುಕೊಂಡಿರಲಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು. ‘ನನ್ನ ಜೊತೆಗೆ ಕೇಜ್ರಿವಾಲ್ ಅವರೊಟ್ಟಿಗೆ ಮಾತನಾಡುವ ಸಂಬಂಧ ಆತಿಶಿ ಅವರೂ ಅರ್ಜಿ ಸಲ್ಲಿಸಿದ್ದರು. ಅದನ್ನು ಕೊನೆಕ್ಷಣದಲ್ಲಿ ರದ್ದುಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

ಸೌರಭ್‌ ಜತೆಯಲ್ಲಿ ಕೇಜ್ರಿವಾಲ್‌ ಅವರನ್ನು ಭೇಟಿಯಾಗಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್‌ ಪಾಠಕ್‌ ಅವರೂ ತೆರಳಬೇಕಿತ್ತು. ಆದರೆ ಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ಪಾಠಕ್‌ ಅವರಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿರುವುದಾಗಿ ತಿಳಿಸಲಾಯಿತು. ಮುಂದೆ ಕೇಜ್ರಿವಾಲ್ ಅವರ ಪತ್ನಿಯ ಭೇಟಿಯನ್ನೂ ರದ್ದುಗೊಳಿಸಬಹುದು ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT