ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ತಮಿಳುನಾಡಿನ ಭವಿಷ್ಯ, ಸಂಸ್ಕೃತಿಯ ಶತ್ರು: ಪ್ರಧಾನಿ ಮೋದಿ

Published 15 ಮಾರ್ಚ್ 2024, 15:52 IST
Last Updated 15 ಮಾರ್ಚ್ 2024, 15:52 IST
ಅಕ್ಷರ ಗಾತ್ರ

ಕನ್ಯಾಕುಮಾರಿ: ‘ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ರಾಜ್ಯದ ಭವಿಷ್ಯದ ಶತ್ರು. ಅಷ್ಟೇ ಅಲ್ಲ ಅದು ಸಂಸ್ಕೃತಿ ಮತ್ತು ಪರಂಪರೆಯ ಶತ್ರುವೂ ಹೌದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಇಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಆಡಳಿತದಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಡಿಎಂಕೆಯು ಕನ್ಯಾಕುಮಾರಿ ಅಭಿವೃದ್ಧಿಗೆ ಮಾಡಿದ್ದು ಅತ್ಯಲ್ಪ. ಇಲ್ಲಿನ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ತ್ವರಿತವಾಗಿ ನಡೆದದ್ದು 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರವೇ ಎಂದು ಮೋದಿ ಪ್ರತಿಪಾದಿಸಿದರು.

‘ಲೂಟಿಗಾಗಿ ಅಧಿಕಾರ ಬಯಸುತ್ತಾರೆ’:

‘ಲೂಟಿ ಮಾಡುವುದೇ ಡಿಎಂಕೆ ಮತ್ತು ಕಾಂಗ್ರೆಸ್‌ನ ಇತಿಹಾಸವಾಗಿದೆ. ಜನರನ್ನು ಲೂಟಿ ಮಾಡುವ ಸಲುವಾಗಿಯೇ ಅವರು ಅಧಿಕಾರಕ್ಕೆ ಬರಲು ಬಯಸುತ್ತಾರೆ. ಬಿಜೆಪಿ ಜನ ಕಲ್ಯಾಣ ಯೋಜನೆಗಳನ್ನು ನೀಡಿದ್ದರೆ, ಇಂಡಿಯಾ ಮೈತ್ರಿ ಕೂಟದವರು ಕೋಟ್ಯಂತರ ರೂಪಾಯಿ ಹಗರಣಗಳನ್ನು ಮಾಡಿದ್ದಾರೆ. ನಾವು ಆಪ್ಟಿಕಲ್‌ ಫೈಬರ್‌, 5ಜಿ ಮತ್ತು ಇತರ ಡಿಜಿಟಲ್‌ ಕ್ರಮಗಳನ್ನು ಜನರಿಗೆ ನೀಡಿದ್ದೇವೆ. ಆದರೆ ಇಂಡಿಯಾ ಮೈತ್ರಿಕೂಟದವರು 2ಜಿ ಹಗರಣ ಮಾಡಿದ್ದಾರೆ’ ಎಂದು ಪ್ರಧಾನಿ ಟೀಕಿಸಿದರು. 

‘ಬಿಜೆಪಿ ಸರ್ಕಾರವು ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಉಡಾನ್‌ ಯೋಜನೆಗಳನ್ನು ಜಾರಿಗೊಳಿಸಿದರೆ, ಇಂಡಿಯಾ ಮೈತ್ರಿಕೂಟದವರು ದೇಶದ ಭದ್ರತೆಯನ್ನೇ ಪಣಕ್ಕಿಟ್ಟು ಹೆಲಿಕಾಪ್ಟರ್‌ ಹಗರಣಗಳನ್ನು ನಡೆಸಿದ್ದಾರೆ. ಹೀಗೇ ಅವರ ಹಗರಣಗಳ ಪಟ್ಟಿ ದೊಡ್ಡದಿದೆ’ ಎಂದು ಅವರು ಜರಿದರು.

ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಕಾರ್ಯ ವೀಕ್ಷಿಸಲು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾಗ, ಆಡಳಿತಾರೂಢ ಡಿಎಂಕೆಯು ಅದಕ್ಕೆ ನಿಷೇದ ಹೇರಿತ್ತು. ಡಿಎಂಕೆ ಸರ್ಕಾರದ ಈ ಕ್ರಮವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು ಎಂದು ಅವರು ಸ್ಮರಿಸಿದರು.

ಈ ಹಿಂದೆ ಜಲ್ಲಿಕಟ್ಟು ಕ್ರೀಡೆಯನ್ನು ನಿಷಧಿಸಿದಾಗ ಮೌನವಾಗಿದ್ದ ಕಾಂಗ್ರೆಸ್‌ ಮತ್ತು ಡಿಎಂಕೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ‘ತಮಿಳುನಾಡಿನ ಹೆಮ್ಮೆ’ಯಾದ ಈ ಕ್ರೀಡೆಯನ್ನು ನಡೆಸಲು ಎನ್‌ಡಿಎ ಸರ್ಕಾರವು ದಾರಿ ಮಾಡಿಕೊಟ್ಟಿತು. ತಮಿಳುನಾಡಿನ ಅಸ್ಮಿತೆ, ಸಂಸ್ಕೃತಿಗೆ ಅಡ್ಡಿಪಡಿಸಲು ಮೋದಿ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. 

‘ಡಿಎಂಕೆ, ಕಾಂಗ್ರೆಸ್‌ ಮಹಿಳಾ ವಿರೋಧಿ’:

ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಬಗ್ಗೆ ಮೃದು ಧೋರಣೆ ಮುಂದುವರಿಸಿದ ಅವರು, ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿತ್ತು ಎಂಬುದು ಜನರಿಗೆ ತಿಳಿದಿದೆ. ಅವರು ಇಂದಿಗೂ ಆ ಸಂಸ್ಕೃತಿಯನ್ನೇ ಮುಂದುವರಿಸಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಿವೆ ಎಂದು ಅವರು ಆರೋಪಿಸಿದರು. 

‘ನಾವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ತಂದಾಗ, ಕಾಂಗ್ರೆಸ್‌ ಮತ್ತು ಡಿಎಂಕೆ ಅದನ್ನು ಬೆಂಬಲಿಸಲಿಲ್ಲ. ಈ ಎರಡೂ ಮಹಿಳಾ ವಿರೋಧಿ ಪಕ್ಷಗಳಾಗಿವೆ. ತಮಿಳುನಾಡಿನ ಜನರು ಇಂಡಿಯಾ ಮೈತ್ರಿಕೂಟದ ಈ ಎರಡೂ ಪಕ್ಷಗಳ ದುರಹಂಕಾರವನ್ನು ಪುಡಿಗಟ್ಟಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT