ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳನ್ನು ಜಾತಿ, ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಬೇಡಿ: ಕೇಂದ್ರ ಸರ್ಕಾರ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಸೂಚನೆ
Published 29 ಫೆಬ್ರುವರಿ 2024, 15:10 IST
Last Updated 29 ಫೆಬ್ರುವರಿ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ಕೈದಿಗಳನ್ನು ಅವರ ಜಾತಿ, ಧರ್ಮದ ಆಧಾರದಲ್ಲಿ ಪ್ರತ್ಯೇಕಿಸದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಈ ಕುರಿತು ಗೃಹ ಸಚಿವಾಲಯವು ಪತ್ರ ಬರೆದಿದ್ದು, ಜೈಲುಗಳಲ್ಲಿನ ಅಡುಗೆ ಮನೆಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸುವ ಸಂದರ್ಭದಲ್ಲಿಯೂ ಯಾವುದೇ ಪಕ್ಷಪಾತ ಮಾಡದಂತೆ ಸೂಚನೆ ನೀಡಿದೆ.

ಕೈದಿಗಳನ್ನು ಅವರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದು ಹಾಗೂ ಇವುಗಳ ಆಧಾರದಲ್ಲಿಯೇ ಅವರಿಗೆ ಜೈಲುಗಳಲ್ಲಿ ಕೆಲಸಕ್ಕೆ ನಿಯೋಜಿಸುವ ಬಗ್ಗೆ ಕೆಲ ರಾಜ್ಯಗಳ ಜೈಲು ಕೈಪಿಡಿಗಳು ಅವಕಾಶ ನೀಡುತ್ತಿರುವ ಅಂಶವನ್ನು ಸಚಿವಾಲಯ ಈ ಪತ್ರದಲ್ಲಿ ಉಲ್ಲೇಖಿಸಿದೆ.

‘ಧರ್ಮ, ಜನಾಂಗ, ಜಾತಿ ಅಥವಾ ಜನಿಸಿದ ಸ್ಥಳದ ಆಧಾರದ ಮೇಲೆ ಪಕ್ಷಪಾತ ಮಾಡುವುದನ್ನು  ಭಾರತೀಯ ಸಂವಿಧಾನ ನಿಷೇಧಿಸಿದೆ. ಸಚಿವಾಲಯವು 2016ರಲ್ಲಿ ‘ಮಾದರಿ ಜೈಲು ಕೈಪಿಡಿ’ ಸಿದ್ಧಪಡಿಸಿ, ಅದನ್ನು ಅದೇ ವರ್ಷ ಮೇನಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದೆ. ಕೈದಿಗಳಿಗೆ ಜೈಲುಗಳಲ್ಲಿನ ಕೆಲಸ ವಹಿಸುವ ವೇಳೆ ಧರ್ಮ, ಜಾತಿ ಆಧಾರದಲ್ಲಿ ಪಕ್ಷಪಾತ ಮಾಡುವುದನ್ನು ಕೈಪಿಡಿಯಲ್ಲಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ನಿಷೇಧಿಸುತ್ತವೆ’ ಎಂದು ವಿವರಿಸಲಾಗಿದೆ.

‘ಅಲ್ಲದೇ, ಒಂದು ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೇರಿದ ಕೈದಿಗಳ ಗುಂಪಿಗೆ ವಿಶೇಷ ಸವಲತ್ತು ನೀಡುವುದನ್ನು, ಸಾಮಾಜಿಕ–ಆರ್ಥಿಕ ಸ್ಥಿತಿ ಅಥವಾ ಜಾತಿ ಇಲ್ಲವೇ ವರ್ಗದ ಆಧಾರದಲ್ಲಿ ಕೈದಿಗಳನ್ನು ವರ್ಗೀಕರಣ ಮಾಡುವುದನ್ನು ಸಹ ಕೈಪಿಡಿ ನಿಷೇಧಿಸುತ್ತದೆ’ ಎಂದೂ ತಿಳಿಸಿದೆ.

ಪಕ್ಷಪಾತ ಮಾಡುವುದಕ್ಕೆ ಅನುವು ಮಾಡಿಕೊಡುವ ಅವಕಾಶಗಳು ಇದ್ದಲ್ಲಿ, ಅವುಗಳನ್ನು ಕೂಡಲೇ ಜೈಲುಗಳ ಕೈಪಿಡಿ ಅಥವಾ ಸಂಬಂಧಪಟ್ಟ ಕಾಯ್ದೆಯಿಂದ ತೆಗೆದು ಹಾಕಬೇಕು ಇಲ್ಲವೇ ತಿದ್ದುಪಡಿ ಮಾಡಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.

ಕೈದಿಗಳಿಗೆ ವೈದ್ಯಕೀಯ ಸೇವೆ ಒದಗಿಸುವುದು ಮುಖ್ಯ. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT