ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ | ತನಿಖೆ ಎದುರಿಸಲು ಸಿದ್ಧ: ಅರವಿಂದ ಕೇಜ್ರಿವಾಲ್

Published 28 ಮಾರ್ಚ್ 2024, 14:09 IST
Last Updated 28 ಮಾರ್ಚ್ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ‘ಆಮ್‌ ಆದ್ಮಿ ಪಕ್ಷ (ಎಎಪಿ) ಭ್ರಷ್ಟಾಚಾರ ನಡೆಸಿದೆ ಎಂದು ದೇಶದ ಮುಂದೆ ಬಿಂಬಿಸಲಾಗುತ್ತಿದ್ದು, ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಎದುರಿಸಲು ನಾನು ಸಿದ್ಧ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇಲ್ಲಿನ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದರು.

ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ಇ.ಡಿ. ಕಸ್ಟಡಿ ಗುರುವಾರ ಕೊನೆಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರು, ನ್ಯಾಯಾಧೀಶರಿಂದ ಅನುಮತಿ ಪಡೆದು, ಈ ನಿವೇದನೆ ಮಾಡಿದರು.

ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ವಿಚಾರಣೆ ನಡೆಸಿದರು.

‘ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ನಾಲ್ಕು ಜನ ಸಾಕ್ಷಿಗಳು ನನ್ನ ಹೆಸರು ಹೇಳಿದ್ದಾರೆ. ನನ್ನನ್ನು ಬಂಧಿಸಲು ಈ ನಾಲ್ವರ ಹೇಳಿಕೆಗಳು ಸಾಕೇ’ ಎಂಬ ಪ್ರಶ್ನೆಯನ್ನು ಕೇಜ್ರಿವಾಲ್‌ ಮುಂದಿಟ್ಟರು.

‘ಶರತ್‌ಚಂದ್ರ ರೆಡ್ಡಿ ಅವರು ಬಿಜೆಪಿಗೆ ₹ 55 ಕೋಟಿ ದೇಣಿಗೆ ನೀಡಿದ್ದಾರೆ. ಅದೂ, ತಮ್ಮನ್ನು ಬಂಧಿಸಿದ ನಂತರ ಅವರು ಈ ಹಣ ನೀಡಿದ್ದು, ಇದಕ್ಕೆ ತಮ್ಮ ಬಳಿ ಸಾಕ್ಷ್ಯಗಳಿವೆ’ ಎಂದರು.

ರೆಡ್ಡಿ ಅವರು ಆರೊಬಿಂದೊ ಫಾರ್ಮಾ ಲಿಮಿಟೆಡ್‌ನ ನಿರ್ದೇಶಕ. ಅಬಕಾರಿ ನೀತಿ ಹಗರಣದಲ್ಲಿ ಸಹ ಆರೋಪಿ. ಅವರು ಈಗ ಮಾಫಿಸಾಕ್ಷಿಯಾಗಿದ್ದಾರೆ.

ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ರಮೇಶ್‌ ಗುಪ್ತಾ, ‘ನನ್ನ ಕಕ್ಷಿದಾರ ತನಿಖೆಗೆ ಸಹಕರಿಸಲು ಇಚ್ಛಿಸಿದ್ದಾರೆ. ಆದರೆ, ಅವರ ಕಸ್ಟಡಿಯನ್ನು ವಿಸ್ತರಿಸಲು ಜಾರಿ ನಿರ್ದೇಶನಾಲಯ ನೀಡುತ್ತಿರುವ ಕಾರಣಗಳ ಪ್ರಕಾರ ನೀಡಲು ಆಗುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನನ್ನ ಪತಿಯ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅವರ ಆರೋಗ್ಯ ಸರಿಯಾಗಿಲ್ಲ. ದೇಹದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರಾಗುತ್ತಿದೆ
ಸುನೀತಾ ಕೇಜ್ರಿವಾಲ್, ಅರವಿಂದ ಕೇಜ್ರಿವಾಲ್ ಪತ್ನಿ

‘ರಾಜಕೀಯ ಪಿತೂರಿ’

ವಿಚಾರಣೆಗಾಗಿ ತಮ್ಮನ್ನು ನ್ಯಾಯಾಲಯದ ಸಭಾಂಗಣಕ್ಕೆ ಕರೆದುಕೊಂಡು ಹೋಗುವ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಕೇಜ್ರಿವಾಲ್‌‘ತಮ್ಮ ವಿರುದ್ಧದ ಈ ಕಾನೂನುಕ್ರಮ ರಾಜಕೀಯ ಪಿತೂರಿ. ಇದಕ್ಕೆ ಜನರು ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದರು. ‘ಜೈಲಿನಿಂದ ದೆಹಲಿ ಸರ್ಕಾರವನ್ನು ಮುನ್ನಡೆಸಲು ಸಾಧ್ಯ ಇಲ್ಲ’ ಎಂಬುದಾಗಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಬುಧವಾರ ಹೇಳಿದ್ದರು. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಕೇಜ್ರಿವಾಲ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ. ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಸಚಿವರಾದ ಆತಿಶಿ ಗೋಪಾಲ್‌ ರಾಯ್‌ ಸೌರಭ್‌ ಭಾರದ್ವಾಜ್‌ ನ್ಯಾಯಾಲಯದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT