ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆ ಪತ್ತೆ ಹಚ್ಚಲು ಚುನಾವಣಾ ಬಾಂಡ್‌ ಸಹಕಾರಿ: ಮೋದಿ

Published 31 ಮಾರ್ಚ್ 2024, 20:09 IST
Last Updated 31 ಮಾರ್ಚ್ 2024, 20:09 IST
ಅಕ್ಷರ ಗಾತ್ರ

ಚೆನ್ನೈ: ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳ ಮೂಲ ಪತ್ತೆ ಹಚ್ಚುವುದಕ್ಕೆ ಚುನಾವಣಾ ಬಾಂಡ್‌ಗಳು ನೆರವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದ್ದಾರೆ.

ತಮಿಳು ಸುದ್ದಿವಾಹಿನಿ ‘ತಂತಿ ಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಚುನಾವಣಾ ಬಾಂಡ್‌ ವಿಷಯ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ್ವಾರೆ.

‘ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರಿಂ ಕೋರ್ಟ್‌ ರದ್ದುಗೊಳಿಸಿರುವ ವಿಚಾರ ನನ್ನ ಸರ್ಕಾರಕ್ಕಾದ ಹಿನ್ನಡೆಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ಕೆಲವು ನ್ಯೂನತೆಗಳು ಇರಬಹುದು. ಆದರೆ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ’ ಎಂದು ಪ್ರತಿಪಾದಿಸಿದರು.

‘ಈ ಯೋಜನೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ನನ್ನ ಸರ್ಕಾರಕ್ಕಾದ ಹಿನ್ನಡೆ ಎಂದು ಭಾವಿಸಲು ನಾವು ಮಾಡಿದ್ದಾದರೂ ಏನು ಹೇಳಿ’ ಎಂದ ಅವರು, ‘ಚುನಾವಣಾ ಬಾಂಡ್‌ಗಳ ವಿವರಗಳು ಬಹಿರಂಗೊಂಡ ನಂತರ ‘ಕುಣಿಯುತ್ತಿರುವವರು’ ಹಾಗೂ ಬೀಗುತ್ತಿರುವವರು ಪಶ್ಚಾತ್ತಾಪ ಪಡಲಿದ್ದಾರೆ’ ಎಂದರು.

ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಿದ್ದನ್ನು ಸಮರ್ಥಿಸಿಕೊಂಡ ಮೋದಿ, ‘2014ಕ್ಕೂ ಮುಂಚೆ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿದ್ದ ದೇಣಿಗೆಯ ಮೂಲ ಗೊತ್ತಾಗುತ್ತಿರಲಿಲ್ಲ. ಚುನಾವಣಾ ಬಾಂಡ್‌ಗಳಿಂದ ಇದು ಈಗ ಸಾಧ್ಯವಾಗಿದೆ’ ಎಂದರು.

‘2014ಕ್ಕೂ ಮುಂಚೆ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿದ್ದ ದೇಣಿಗೆಗಳ ಮೂಲಗಳ ಬಗ್ಗೆ ಯಾವುದಾದರೂ ಸಂಸ್ಥೆ ಮಾಹಿತಿ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಸಖ್ಯ ತೊರೆದಿದ್ದಕ್ಕೆ ಎಐಎಡಿಎಂಕೆ ವಿಷಾದಿಸಬೇಕು’

‘ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದಕ್ಕೆ ಎಐಎಡಿಎಂಕೆ ವಿಷಾದ ವ್ಯಕ್ತಪಡಿಸಬೇಕೇ ಹೊರತು ಬಿಜೆಪಿ ಅಲ್ಲ’ ಎಂದರು. ‘ಬಿಜೆಪಿ ಜತೆಗಿನ ಸಖ್ಯ ತೊರೆದಿದ್ದಕ್ಕಾಗಿ ದಿವಂಗತ ಜೆ.ಜಯಲಲಿತಾ ಅವರ ಕನಸುಗಳನ್ನು ನುಚ್ಚುನೂರು ಮಾಡಿದವರು ಚಿಂತಿತರಾಗಬೇಕು’ ಎಂದು ಎಐಎಡಿಎಂಕೆ ವಿರುದ್ಧ ಟೀಕಾಪ್ರಹಾರ ನಡೆಸಿದರು.

‘ನಗರ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಒಂದು ಸ್ಥಾನ ಹೊಂದಿರದಿದ್ದರೂ ತಮಿಳುನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಶ್ರಮಿಸಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಉತ್ತಮ ಕೆಲಸ ಮಾಡುತ್ತಿದ್ದು ಯುವ ಜನರು ಅವರತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದರು. ‘ಅಣ್ಣಾಮಲೈ ಕುರಿತು ಯುವ ಜನತೆಗೆ ಸದಭಿಪ್ರಾಯ ಇದೆ. ಹಣ ಗಳಿಕೆ ಮತ್ತು ಭ್ರಷ್ಟಾಚಾರವೇ ಅಣ್ಣಾಮಲೈಗೆ ಮುಖ್ಯವಾಗಿದ್ದರೆ ಅವರು ಡಿಎಂಕೆ ಸೇರುತ್ತಿದ್ದರು ಎಂಬ ಅನಿಸಿಕೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಅವರು ಬಿಜೆಪಿ ಸೇರಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ತಮಿಳುನಾಡು ಅಭಿವೃದ್ಧಿಯೇ ಅವರಿಗೆ ಮುಖ್ಯ’ ಎಂದು ಹೇಳಿದರು. ‘ತಮಿಳು ಭಾಷೆ ವಿಚಾರವನ್ನು ರಾಜಕೀಯಗೊಳಿಸುವುದು ತಮಿಳುನಾಡಿಗೆ ಮಾತ್ರವಲ್ಲ ದೇಶಕ್ಕೆ ಅಪಾಯಕಾರಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT