ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಪಿಗೆ ₹7 ಕೋಟಿ ವಿದೇಶಿ ದೇಣಿಗೆ: ಗೃಹ ಸಚಿವಾಲಯಕ್ಕೆ ಇ.ಡಿ ಪತ್ರ

Published 20 ಮೇ 2024, 15:32 IST
Last Updated 20 ಮೇ 2024, 15:32 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಎಎಪಿಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿ ಸುಮಾರು ₹7 ಕೋಟಿ ವಿದೇಶಿ ದೇಣಿಗೆ ಪಡೆದುಕೊಂಡಿರುವುದಾಗಿ ಆರೋಪಿಸಿ ಜಾರಿ ನಿರ್ದೇಶನಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ಸೋಮವಾರ ಹೇಳಿವೆ.

ಪಂಜಾಬ್‌ನ ಎಎಪಿ ಮಾಜಿ ಶಾಸಕ ಸುಖಪಾಲ್ ಸಿಂಗ್ ಖೈರಾ ಮತ್ತು ಇತರ ಕೆಲವರ ವಿರುದ್ಧದ ಮಾದಕವಸ್ತು ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ವೇಳೆ ಕೆಲವು ಮಹತ್ವದ ದಾಖಲೆಗಳು ಮತ್ತು ಇ–ಮೇಲ್‌ಗಳನ್ನು ವಶಪಡಿಸಿಕೊಂಡ ನಂತರ ಕೇಂದ್ರ ತನಿಖಾ ಏಜೆನ್ಸಿಯು ಗೃಹ ಸಚಿವಾಲಯದ ಜತೆಗೆ ಸಂವಹನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ತನಿಖೆ 2021ರಲ್ಲಿ ಶುರುವಾಗಿದ್ದು, ಅದೇ ವರ್ಷ ಖೈರಾ ಅವರನ್ನು ಇ.ಡಿ ಬಂಧಿಸಿತ್ತು. ಖೈರಾ ಅವರು ಸದ್ಯ ಕಾಂಗ್ರೆಸ್‌ನಲ್ಲಿದ್ದಾರೆ.

‘ಎಫ್‌ಸಿಆರ್‌ಎ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಎಎಪಿ ಉಲ್ಲಂಘಿಸಿ ವಿದೇಶಿ ದೇಣಿಗೆ ಪಡೆದಿರುವ ಬಗ್ಗೆ ಇ.ಡಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ವಿವರವಾದ ಪತ್ರ ಕಳುಹಿಸಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧ ಹೊಸತಾದ ಒಂದಿಷ್ಟು ಪೂರಕ ಮಾಹಿತಿಗಳನ್ನು ಇ.ಡಿಯು ಇತ್ತೀಚೆಗೆ ಗೃಹ ಸಚಿವಾಲಯದೊಂದಿಗೆ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ.

‘ಎಎಪಿಯು ಈವರೆಗೆ ಸುಮಾರು ₹7.08 ಕೋಟಿ ಸಾಗರೋತ್ತರ ದೇಣಿಗೆ ಸ್ವೀಕರಿಸಿದೆ. ದೇಣಿಗೆ ನೀಡಿದ ವಿದೇಶಿಗರ ಗುರುತು ಮತ್ತು ರಾಷ್ಟ್ರೀಯತೆಯನ್ನು ಮರೆಮಾಚಿ, ಸುಳ್ಳು ಮಾಹಿತಿ ನೀಡಿದೆ. ದೇಣಿಗೆ ನೀಡಿರುವ ಕೆನಡಾ ಮೂಲದ ಕೆಲವು ಜನರ ಹೆಸರುಗಳು ಮತ್ತು ಅವರ ರಾಷ್ಟ್ರೀಯತೆಗಳನ್ನೂ ಮರೆಮಾಚಲಾಗಿದೆೆ’ ಎಂದು ಇ.ಡಿಯು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

ಎಎಪಿಗೆ ದೇಣಿಗೆ ನೀಡಿದ ವಿದೇಶಿಗರ ಹೆಸರುಗಳು, ಅವರ ರಾಷ್ಟ್ರೀಯತೆ, ಪಾಸ್‌ಪೋರ್ಟ್ ವಿವರ, ದೇಣಿಗೆ ನೀಡಿದ ಮೊತ್ತ, ದೇಣಿಗೆಯ ವಿಧಾನ ಮತ್ತು ಸ್ವೀಕರಿಸಿದ ಬ್ಯಾಂಕ್ ಖಾತೆ ಸಂಖ್ಯೆ, ವಿಳಾಸ, ಫೋನ್ ಸಂಖ್ಯೆಗಳು, ಇಮೇಲ್, ಸಮಯ ಮತ್ತು ದಿನಾಂಕದ ಬಗ್ಗೆ ಸಮಗ್ರ ವಿವರಗಳನ್ನು ತನಿಖಾ ಏಜೆನ್ಸಿಯು ಗೃಹ ಸಚಿವಾಲಯಕ್ಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

2015 ಮತ್ತು 2016ರ ನಡುವೆ ಅಮೆರಿಕ ಮತ್ತು ಕೆನಡಾದಲ್ಲಿ ತನ್ನ ಸಾಗರೋತ್ತರ ವಿಭಾಗದ ಸ್ವಯಂಸೇವಕರ ಮೂಲಕ ಎಎಪಿ ನಡೆಸಿದ ದೇಣಿಗೆ ಸಂಗ್ರಹದ ಕೆಲವು ಕಾರ್ಯಕ್ರಮಗಳಲ್ಲಿ ಎಫ್‌ಸಿಆರ್‌ಎ ಉಲ್ಲಂಘಿಸಿರುವುದು  ವರದಿಯಾಗಿದೆ ಎಂದು ಇ.ಡಿಯು ಸಚಿವಾಲಯಕ್ಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT