ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ

Published 25 ಜೂನ್ 2024, 10:26 IST
Last Updated 25 ಜೂನ್ 2024, 10:26 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.

ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರನ್ನೊಳಗೊಂಡ ಹೈಕೋರ್ಟ್‌ನ ರಜಾ ಕಾಲದ ಏಕ ಸದಸ್ಯ ಪೀಠ, ಪ್ರಕರಣ ಸಂಬಂಧ ನ್ಯಾಯಾಲಯದ ಮುಂದಿಟ್ಟ ಸಾಕ್ಷ್ಯಗಳು ಮತ್ತು ವಾದದ ಕುರಿತಂತೆ ಜಾರಿ ನಿರ್ದೇಶನಾಲಯವನ್ನು ಪ್ರಶಂಸಿಸಿದೆ. ಜಾಮೀನು ನೀಡುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯ ಈ ವಿಷಯಗಳನ್ನು ಪರಿಗಣಿಸಿಲ್ಲ ಎಂದಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯವು ಈ ಪ್ರಕರಣದಲ್ಲಿ ವಾದಿಸಲು ಇ.ಡಿಗೆ ಸಾಕಷ್ಟು ಅವಕಾಶವನ್ನು ನೀಡಬೇಕಾಗಿತ್ತು. ಹಾಗಾಗಿ, ದೋಷದಿಂದ ಕೂಡಿದ ಜಾಮೀನು ಆದೇಶಕ್ಕೆ ತಡೆ ನೀಡುತ್ತಿರುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಜೂನ್ 20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯ, ₹1 ಲಕ್ಷ ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆಗೆ ಸೂಚಿಸಿತ್ತು.

ಮರುದಿನ ಹೈಕೋರ್ಟ್‌ ಮೊರೆ ಹೋಗಿದ್ದ ಇ.ಡಿ, ವಿಚಾರಣಾ ನ್ಯಾಯಾಲಯದ ಆದೇಶವು ಏಕಪಕ್ಷೀಯ ಮತ್ತು ದೋಷದಿಂದ ಕೂಡಿದೆ. ನ್ಯಾಯಾಲಯದ ಆದೇಶ ಅಪ್ರಸ್ತುತ ಸತ್ಯಗಳನ್ನು ಆಧರಿಸಿವೆ ಎಂದು ವಾದಿಸಿತ್ತು.

ದೆಹಲಿ ಅಬಕಾರಿ ನೀತಿ ರಚನೆ ಮತ್ತು ಜಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ ಬಳಿಕ 2022ರಲ್ಲಿ ಅಬಕಾರಿ ನೀತಿಯನ್ನು ರದ್ದು ಮಾಡಲಾಗಿತ್ತು.

ಅಬಕಾರಿ ನೀತಿ ರಚನೆಯಲ್ಲಿ ಅಕ್ರಮ ಮತ್ತು ಪರವಾನಗಿದಾರರಿಗೆ ಅನುಕೂಲ ಮಾಡಿಕೊಡುವ ಯತ್ನ ನಡೆದಿತ್ತು ಎಂದು ಇ.ಡಿ ಮತ್ತು ಸಿಬಿಐ ಆರೋಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT