ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಪತ್ರ: ಆಶ್ಚರ್ಯ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್

Published 14 ಡಿಸೆಂಬರ್ 2023, 16:17 IST
Last Updated 14 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ: ವಕೀಲರು ತಮ್ಮ ಪ್ರಕರಣದ ವಿಚಾರಣೆ ನಡೆಸಲು ಇಂತಹ ನ್ಯಾಯಮೂರ್ತಿಯೇ ಬೇಕು, ಇಂತಹ ನ್ಯಾಯಮೂರ್ತಿ ಬೇಡ ಎಂದು ಹೇಳುವುದನ್ನು ಕೇಳಿದಾಗ ಬಹಳ ಆಶ್ಚರ್ಯ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಗುರುವಾರ ಹೇಳಿದರು.

ಕೆಲವು ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ನಿರ್ದಿಷ್ಟ ನ್ಯಾಯಪೀಠವೊಂದಕ್ಕೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಮಾಜಿ ಅಧ್ಯಕ್ಷ ದುಷ್ಯಂತ್ ದವೆ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಪತ್ರಗಳನ್ನು ಬರೆದ ನಂತರದಲ್ಲಿ ಸಿಜೆಐ ಈ ಮಾತು ಆಡಿದ್ದಾರೆ.

ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರ ನ್ಯಾಯಪೀಠಕ್ಕೆ ವಹಿಸಲಾಗಿದೆ. ಏಕೆಂದರೆ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಸಿಜೆಐ ಅವರು ಜೈನ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ತಿಳಿಸಿದರು.

‘ಕೋರ್ಟ್‌ನ ರಿಜಿಸ್ಟ್ರಿಗೆ ಹಲವು ಪತ್ರಗಳನ್ನು ರವಾನಿಸಲಾಗಿದೆ. ಪ್ರಕರಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದು ಏಕೆ ಎಂದು ‍ಪ್ರಶ್ನಿಸಲಾಗಿದೆ. ನಾನು ಅದಕ್ಕೆ ಕಾರಣವನ್ನು ಹೇಳುತ್ತೇನೆ. ಪತ್ರ ರವಾನಿಸುವುದು, ಆರೋಪ ಮಾಡುವುದು ಬಹಳ ಸುಲಭ... ನ್ಯಾಯಮೂರ್ತಿ ಬೋಪಣ್ಣ ಅವರ ಕಚೇರಿಯಿಂದ ಸಂದೇಶವೊಂದು ಬಂದಿತ್ತು... ವೈದ್ಯಕೀಯ ಕಾರಣಗಳಿಂದಾಗಿ ಅವರು ದೀಪಾವಳಿ ನಂತರ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿ ಬೇಲಾ ಅವರಿಗೆ ವಹಿಸಲಾಯಿತು. ಅವರು ಮೊದಲು ಈ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ಇದ್ದರು’ ಎಂದು ಸಿಜೆಐ ವಿವರಿಸಿದರು.

ಇಂತಹ ನ್ಯಾಯಮೂರ್ತಿಯೇ ತಮ್ಮ ಪ್ರಕರಣದ ವಿಚಾರಣೆ ನಡೆಸಬೇಕು ಎಂಬ ಪತ್ರಗಳನ್ನು ಉಪೇಕ್ಷಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.

ಜೈನ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೇಲಾ ಅವರು ಇದ್ದ ವಿಭಾಗೀಯ ಪೀಠವು, ಜೈನ್ ಅವರಿಗೆ ನೀಡಿರುವ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನವರಿ 8ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT