ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇವಿಎಂ ಲೋಪ ಬಹಿರಂಗಕ್ಕೆ ಗೌರವ ಗೊಗೊಯಿ ಆಗ್ರಹ

Published 17 ಜೂನ್ 2024, 12:41 IST
Last Updated 17 ಜೂನ್ 2024, 12:41 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಷ್ಟು ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಲೋಪಗಳು ಪತ್ತೆಯಾಗಿದ್ದವು ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕಾಂಗ್ರೆಸ್ ಮುಖಂಡ, ಸಂಸದ ಗೌರವ ಗೊಗೊಯಿ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಗೊಗೊಯಿ ಅವರು ಅಸ್ಸಾಂನ ಜೋರಹಾಟ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ 1.44 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ‘ಇವಿಎಂಗಳು ನಿಖರವಲ್ಲದ ಫಲಿತಾಂಶ ನೀಡಿವೆ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ’ ಎಂದು ಗೊಗೊಯಿ ಹೇಳಿದ್ದಾರೆ.

ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಶಿವಸೇನಾ ಅಭ್ಯರ್ಥಿಯ ಸಂಬಂಧಿಯೊಬ್ಬರು ಮತ ಎಣಿಕೆಯ ದಿನ (ಜೂನ್ 4) ಇವಿಎಂ ಜೊತೆ ಸಂಪರ್ಕ ಹೊಂದಿದ್ದ ಮೊಬೈಲ್‌ ಫೋನ್ ಬಳಸುತ್ತಿದ್ದರು ಎಂದು ಹೇಳುವ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ಇತರ ಮುಖಂಡರು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಅಭಿಪ್ರಾಯ ದಾಖಲಿಸಿದ ನಂತರದಲ್ಲಿ ಗೊಗೊಯಿ ಈ ಮಾತು ಹೇಳಿದ್ದಾರೆ.

ಇವಿಎಂಗಳಲ್ಲಿ ಲೋಪಗಳು ಇಲ್ಲ ಎಂದು ಹೇಳುವ ಮುನ್ನ ಚುನಾವಣಾ ಆಯೋಗವು, ಚುನಾವಣೆಯ ಸಂದರ್ಭದಲ್ಲಿ ಎಷ್ಟು ಇವಿಎಂಗಳಲ್ಲಿ ಲೋಪಗಳು ಕಂಡುಬಂದಿದ್ದವು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಗೊಗೊಯಿ ಅವರು ಎಕ್ಸ್‌ ಮೂಲಕ ಒತ್ತಾಯಿಸಿದ್ದಾರೆ.

ಎಷ್ಟು ಇವಿಎಂಗಳು ಸಮಯ, ದಿನಾಂಕ, ದಾಖಲಾದ ಮತಗಳನ್ನು ತಪ್ಪಾಗಿ ತೋರಿಸಿದ್ದವು, ಎಷ್ಟು ಇವಿಎಂಗಳ ಬಿಡಿಭಾಗಗಳನ್ನು ಬದಲಾಯಿಸಲಾಯಿತು, ಅಣಕು ಮತದಾನದ ವೇಳೆ ಎಷ್ಟು ಇವಿಎಂಗಳಲ್ಲಿ ಲೋಪ ಕಂಡುಬಂತು ಎಂಬುದನ್ನು ಆಯೋಗ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಂಬೈ ವಾಯವ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಿಡ್‌–ಡೇ ಪತ್ರಿಕೆಯ ವರದಿಯು ‘ಸುಳ್ಳು ಸುದ್ದಿ’ ಎಂದು ಚುನಾವಣಾ ಅಧಿಕಾರಿ ವಂದನಾ ಸೂರ್ಯವಂಶಿ ಅವರು ಹೇಳಿದ್ದಾರೆ. ಪತ್ರಿಕೆಗೆ ಮಾನನಷ್ಟ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT