ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಭಯೋತ್ಪಾದನೆ ಚಟುವಟಿಕೆ: ಮಹಿಳೆ ಸೇರಿ ನಾಲ್ವರ ಬಂಧನ

Published 10 ಜೂನ್ 2023, 10:31 IST
Last Updated 10 ಜೂನ್ 2023, 10:31 IST
ಅಕ್ಷರ ಗಾತ್ರ

ಅಹಮದಾಬಾದ್: ಪೋರಬಂದರ್‌ ಮತ್ತು ಸೂರತ್‌ನಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿರುವ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಖೋರಾಸನ್‌ ಪ್ರಾಂತ್ಯದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಕೆಪಿ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಬಂಧಿಸಿದೆ.

ಬಂಧಿತರಲ್ಲಿ ಮೂವರು ಪುರುಷರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರಾಗಿದ್ದು, ಪೋರಬಂದರ್‌ನಲ್ಲಿ ಸೆರೆಸಿಕ್ಕಿದ್ದಾರೆ. ಮಹಿಳೆಯನ್ನು ಸೂರತ್‌ನಲ್ಲಿ ಬಂಧಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ವಿಕಾಸ್‌ ಸಹಾಯ್‌ ತಿಳಿಸಿದ್ದಾರೆ.

ಈ ಸಂಬಂಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಸಂಪರ್ಕದಲ್ಲಿರುವ ಉಳಿದ ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಬಂಧಿತರನ್ನು ಉಬೆದ್‌ ನಾಸಿರ್‌ ಮಿರ್‌, ಹನಾನ್‌ ಹಯಾತ್‌ ಶೋಲ್‌ ಮತ್ತು ಮೊಹಮ್ಮದ್ ಹಜೀಂ ಶಾ ಎಂದು ಗುರುತಿಸಲಾಗಿದೆ.

ಐಎಸ್‌ಕೆಪಿ ಎಂಬುದು ಕ್ರಾಂತಿಕಾರಿ ಜಿಹಾದಿ ಸಂಘಟನೆಯಾಗಿದ್ದು, ವಿಶ್ವಸಂಸ್ಥೆಯು ಇದನ್ನು ಉಗ್ರ ಸಂಘಟನೆ ಎಂದು ಗುರುತಿಸಿದೆ.

'ಸೆರೆಯಾದ ಮೂವರು ಪುರುಷರು ಪೋರಬಂದರ್‌ನಿಂದ ಮೀನುಗಾರಿಕೆ ದೋಣಿಯ ಮೂಲಕ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆಯನ್ನು ದಾಟಿ, ಇರಾನ್‌ ಮಾರ್ಗವಾಗಿ ಅಫ್ಗಾನಿಸ್ತಾನ ತಲುಪಲು ಹಾಗೂ ಅಲ್ಲಿ ಐಎಸ್‌ಕೆಪಿ ಸೇರಲು ಯೋಜಿಸಿದ್ದರು' ಎಂದು ವಿಕಾಸ್‌ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಅಬು ಹಂಜಾ ಎಂಬಾತನಿಂದ ತರಬೇತಿ ಪಡೆದಿರುವುದಾಗಿ ತಿಳಿಸಿರುವ ಬಂಧಿತರು, ಐಎಸ್‌ಕೆಪಿ ಸಂಘಟನೆಗೆ ಸೇರಿದ ಶ್ರೀನಗರದ ಜುಬೇರ್‌ ಅಹಮದ್‌ ಮುನ್ಷಿ ಮತ್ತು ಸೂರತ್‌ನ ಸುಮೆರಾಬಾನು ಹನೀಫ್‌ ಮಲೆಕ್‌ ಎಂಬ ಇನ್ನೂ ಇಬ್ಬರು ತಮ್ಮೊಂದಿಗೆ ಇದ್ದಾರೆ ಎಂದು ಬಾಯಿ ಬಿಟ್ಟಿದ್ದಾರೆ.

ಈ ಮಾಹಿತಿ ಆಧರಿಸಿ ಗುಜರಾತ್‌ ಎಟಿಎಸ್‌ ಮತ್ತು ಸೂರತ್‌ ಅಪರಾಧ ವಿಭಾಗ, ಸುಮೆರಾಬಾನು ಮನೆ ಮೇಲೆ ದಾಳಿ ನಡೆಸಿದ್ದು, 'ವಾಯ್ಸ್‌ ಆಫ್‌ ಖೋರಾಸನ್‌' ಎಂಬಿತ್ಯಾದಿ ತೀವ್ರವಾದಿ ಪ್ರಕಟಣೆಗಳು, ಮೊಬೈಲ್‌ ಫೋನ್‌ಗಳು, ಡಿಜಿಟಲ್‌ ದತ್ತಾಂಶ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿವೆ. ಮಹಿಳೆಯನ್ನು ಬಂಧಿಸಿವೆ.

ತಮ್ಮ ಸಂಬಂಧಿಯೂ ಆದ ಜುಬೇರ್‌ ಜೊತೆ ನಿಕಟ ಸಂಪರ್ಕದಲ್ಲಿದ್ದುದ್ದಾಗಿ ಸುಮೆರಾಬಾನು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT