ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿ: ತ್ರಿಪುರಾದಲ್ಲಿ ಶಾಲೆಗಳಿಗೆ ರಜೆ

Published 24 ಏಪ್ರಿಲ್ 2024, 15:58 IST
Last Updated 24 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಅಗರ್ತಲಾ: ತ್ರಿಪುರಾದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಬಿಸಿಗಾಳಿ ವ್ಯಾಪಕವಾಗುತ್ತಿರುವ ಪರಿಣಾಮ ಏಪ್ರಿಲ್ 24ರಿಂದ 27ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. 

ರಾಜ್ಯದಲ್ಲಿ ಬುಧವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯ ದಿನಗಳಲ್ಲಿ ದಾಖಲಾಗುವ ತಾಪಮಾನಕ್ಕಿಂತಲೂ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು. ಈಶಾನ್ಯ ಭಾರತದ ಈ ರಾಜ್ಯದಲ್ಲಿ ಈ ವಾರದಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ತಿಳಿಸಿದೆ. 

ಈ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ 27ರವರೆಗೆ ರಾಜ್ಯದಲ್ಲಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎನ್.ಸಿ. ಶರ್ಮಾ ತಿಳಿಸಿದ್ದಾರೆ. 

ಇಡೀ ರಾಜ್ಯದಲ್ಲಿ ಬಿಸಿಲಿನ ಧಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮುಂದಿನ ಕೆಲವು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಹೀಗಾಗಿ ರಾಜ್ಯದಲ್ಲಿ ‘ವಿಪತ್ತು ಪರಿಸ್ಥಿತಿ’ ಘೋಷಣೆ ಮಾಡಲಾಗಿದೆ. ಬೇಸಿಗೆಯ ಧಗೆಯಿಂದ ಜನರು ಸುರಕ್ಷಿತವಾಗಿರಲು ಜಾಗೃತಿ ಮೂಡಿಸಲು ಜಿಲ್ಲಾ ಹಂತದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲೂ ಎಚ್ಚರಿಕೆ

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಲವು ಭಾಗಗಳು ಠಾಣೆ ರಾಯಗಡ ಜಿಲ್ಲೆಗಳಲ್ಲಿ ಏಪ್ರಿಲ್ 27ರಿಂದ 29ರವರೆಗೆ ಭಾರಿ ಪ್ರಮಾಣದ ಬಿಸಿಗಾಳಿಯ ತಾಪ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಎಚ್ಚರಿಕೆ ನೀಡಿದೆ.  ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ಏ.27 ಮತ್ತು 28ರಂದು ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಈ ಮೂಲಕ ಮುಂಬೈ ಮತ್ತು ನೆರೆಯ ಪ್ರಾಂತ್ಯಕ್ಕೆ ಈ ತಿಂಗಳಲ್ಲಿ ನೀಡಲಾಗುತ್ತಿರುವ ಎರಡನೇ ಬಿಸಿಗಾಳಿಯ ಎಚ್ಚರಿಕೆಯಾಗಿದೆ.  

ಬಿಹಾರದ ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಅವಧಿ ವಿಸ್ತರಣೆ 

ನವದೆಹಲಿ (ಪಿಟಿಐ): ಬಿಸಿಲಿನ ಝಳ ಹೆಚ್ಚಾಗಿರುವ ಕಾರಣಕ್ಕೆ ಬಿಹಾರದ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ವಿಧಾನಸಭೆ ಭಾಗಗಳಲ್ಲಿ ಮತದಾನದ ಅವಧಿಯನ್ನು ಚುನಾವಣಾ ಆಯೋಗವು ಎರಡು ಗಂಟೆಗಳ ಕಾಲ ವಿಸ್ತರಣೆ ಮಾಡಿದೆ.  ಅಧಿಸೂಚನೆ ಪ್ರಕಾರ ಬಂಕಾ ಮಾಧೆಪುರ ಖಾಗೇರಿಯಾ ಮತ್ತು ಮುಂಗಾರ್ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಕೋರಿಕೆ ಮೇರೆಗೆ ಈ ನಾಲ್ಕು ಕ್ಷೇತ್ರಗಳ ಕೆಲವು ಕಡೆಗಳಲ್ಲಿ ಮತದಾನದ ಅವಧಿಯನ್ನು ಸಂಜೆ 6ರವರೆಗೆ ವಿಸ್ತರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT