ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಬಿಜೆಪಿ ಜೊತೆ ಮೈತ್ರಿಗೆ ಟಿಡಿಪಿ, ವೈಎಸ್‌ಆರ್‌ಸಿಪಿ ಆಸಕ್ತಿ

Published 18 ಫೆಬ್ರುವರಿ 2024, 23:30 IST
Last Updated 18 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಅಮರಾವತಿ: ಲೋಕಸಭಾ ಚುನಾವಣೆಯ ಜೊತೆಯಲ್ಲಿಯೇ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಮತ್ತು ಅದರ ವಿರೋಧಿ ಟಿಡಿಪಿ, ಬಿಜೆಪಿ ಜೊತೆ ಚುನಾವಣಾ ಮೈತ್ರಿ ಸಾಧಿಸುವ ಹವಣಿಕೆಯಲ್ಲಿವೆ. ಆದರೆ, ಇದುವರೆಗೆ ಯಾವುದೇ ತೀರ್ಮಾನ ಪ್ರಕಟವಾಗಿಲ್ಲ.

ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಫೆಬ್ರುವರಿ 8ರಂದು ನವದೆಹಲಿಯಲ್ಲಿ ತಡರಾತ್ರಿ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ. ಅವರಿಬ್ಬರೂ ರಾಜಕೀಯ ಹೊಂದಾಣಿಕೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ‘ಎರಡೂ ಪಕ್ಷಗಳು ಮೈತ್ರಿಯ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಘೋಷಿಸಬಹುದು’ ಎಂದು ಮೂಲವೊಂದು ಹೇಳಿದೆ.

ಟಿಡಿಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರುವರಿ 10ರಂದು ಪ್ರಕಟಿಸಬೇಕಿತ್ತು. ಆದರೆ ಮೈತ್ರಿ ಮಾತುಕತೆಯ ಕಾರಣದಿಂದಾಗಿ ಅದು ವಿಳಂಬವಾಗಿದೆ. ಈಗ ಟಿಡಿಪಿ ಮತ್ತು ಬಿಜೆಪಿ ನಡುವೆ ತೆರೆಮರೆಯ ಮಾತುಕತೆಗಳು ನಡೆಯುತ್ತಿವೆ.

‘ನಾಯ್ಡು ಅವರು ಬಿಜೆಪಿ ಜೊತೆ ಸಾಗಲಿದ್ದಾರೆ ಎಂಬುದು ಸ್ಪಷ್ಟ’ ಎಂದು ರಾಜಕೀಯ ವಿಶ್ಲೇಷಕ ತೆಲಕಪಲ್ಲಿ ರವಿ ಹೇಳಿದರು. ‘ಬಿಜೆಪಿ ಜೊತೆ ನಮಗೆ ಹೇಳಿಕೊಳ್ಳುವಂತಹ ತಕರಾರು, ಭಿನ್ನತೆ ಇಲ್ಲ’ ಎಂದು ಟಿಡಿಪಿ ವಕ್ತಾರೆ ಜ್ಯೋತ್ಸ್ನಾ ತಿರುನಗರಿ ಹೇಳಿದರು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಜೊತೆ ಟಿಡಿಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದೆ.

ನಾಯ್ಡು ಅವರ ಭೇಟಿ ಕೊನೆಗೊಂಡ ಕೆಲವೇ ಗಂಟೆಗಳ ನಂತರದಲ್ಲಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ದೆಹಲಿಗೆ ಧಾವಿಸಿದರು. ಇದು ರಾಜಕೀಯ ಹೊಂದಾಣಿಕೆ ಕುರಿತು ಇನ್ನೊಂದಷ್ಟು ಊಹೆಗಳಿಗೆ ಕಾರಣವಾಯಿತು.

ಬಿಜೆಪಿಗೆ ಆಂಧ್ರಪ್ರದೇಶದಲ್ಲಿ ರಾಜಕೀಯ ನೆಲೆ ಇಲ್ಲ ಎಂಬುದು ಟಿಡಿಪಿಗೆ ಗೊತ್ತಿದೆ. ಆದರೆ ವೈಎಸ್‌ಆರ್‌ಸಿಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಟಿಡಿಪಿಯು ಬಿಜೆಪಿಯ ಮೊರೆ ಹೋಗುತ್ತಿದೆ. ರಾಜಕೀಯವಾಗಿ ಜಾಣನಾಗಿರುವ ಬಿಜೆಪಿಯು ಟಿಡಿಪಿ ಜೊತೆಗೂ ವೈಎಸ್‌ಆರ್‌ಸಿಪಿ ಜೊತೆಗೂ ಸ್ನೇಹ ಕಾಯ್ದುಕೊಳ್ಳುತ್ತಿದೆ. ಚುನಾವಣೆ ಹೊತ್ತಿನಲ್ಲಿ ಬಿಜೆಪಿಯು ಟಿಡಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಅದು ಆಂಧ್ರಪ್ರದೇಶ ಮುಖ್ಯಮಂತ್ರಿಯ ವೈರ ಕಟ್ಟಿಕೊಳ್ಳುವುದಿಲ್ಲ ಎಂದು ನಾಗಾರ್ಜುನ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ವಿ. ಆಂಜಿರೆಡ್ಡಿ ಹೇಳಿದರು.

ಕೇಂದ್ರ ಸರ್ಕಾರದ ಬಲವನ್ನು ಬಳಸಿಕೊಂಡು ಜಗನ್‌ ಅವರನ್ನು ರಾಜಕೀಯವಾಗಿ ಹಣಿಯಲು, ಚುನಾವಣೆ ಹೊತ್ತಿನಲ್ಲಿ ಹಣದ ಹರಿವು, ತೋಳ್ಬಲ ಮತ್ತು ಅಧಿಕಾರಿಗಳ ಬಲವನ್ನು ನಿಯಂತ್ರಿಸಲು ಟಿಡಿಪಿ ಹೆಚ್ಚಿನ ಆಸಕ್ತಿ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT