ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ರಸ್ತೆಗಳು ಜಲಾವೃತ, ಮನೆಗಳಿಗೆ ಹಾನಿ: ವ್ಯಕ್ತಿ ಸಾವು
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು ಹಲವೆಡೆ ಮರಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದ್ದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರಾಜ್ಯದ 14 ಜಿಲ್ಲೆಗಳ ಪೈಕಿ ಕೊಲ್ಲಂ ಮತ್ತು ತಿರುವನಂತಪುರ ಹೊರತು ಪಡಿಸಿ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಐಎಂಡಿ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ. 

ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಪತ್ತನಂತಿಟ್ಟ ಜಿಲ್ಲೆಯಲ್ಲಿ ಹೊಳೆಯಲ್ಲಿ ಆಟೋರಿಕ್ಷಾ ಮುಗುಚಿಬಿದ್ದು, ಚಾಲಕ ಸಾವಿಗೀಡಾಗಿದ್ದಾನೆ. ಕೋಯಿಕ್ಕೋಡ್ ಜಿಲ್ಲೆಯ ಥಾಮರಸ್ಸೆರಿ ತಾಲ್ಲೂಕಿನಲ್ಲಿ ಉಕ್ಕಿಹರಿಯುತ್ತಿದ್ದ ನದಿಯಲ್ಲಿ 68 ವರ್ಷದ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಶೋಧ ಕಾರ್ಯ ಕೈಗೊಳ್ಳಲಾಗಿದೆ. 

ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳನ್ನು ಪರಿಹಾರ ಶಿಬಿರಗಳನ್ನಾಗಿ ಪರಿವರ್ತಿಸಲಾಗಿದ್ದು, ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. 

ಎಚ್ಚರಿಕೆ: ಪೆರಿಯಾರ್ ಮತ್ತು ಮುಥಿರಪುಳ ನದಿತೀರದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು ಇಲ್ಲಿನ ನಿವಾಸಿಗಳು ಎಚ್ಚರಿಕೆ ವಹಿಸಬೇಕು ಹಾಗೂ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಲ್ಲಿನ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.  

ನದಿ ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಲ್ಲರ್‌ಕುಟ್ಟಿ ಮತ್ತು ಪಾಂಬ್ಲಾ ಅಣೆಕಟ್ಟುಗಳ ಗೇಟುಗಳನ್ನು ತೆರೆಯಲಾಗಿದೆ. ಮಲಪ್ಪುರಂ ಜಿಲ್ಲೆಯ ಚಾಲಿಯಾರ್ ನದಿಗೆ ಕಟ್ಟಲಾಗಿರುವ ಕವನಕಲ್ಲು ರೆಗ್ಯುಲೇಟರ್ ಕಮ್ ಬ್ರಿಡ್ಜ್‌ನ ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಕರಿಕ್ಕಯಂ, ಉಲ್ಲುನ್ಕಲ್ ಮತ್ತು ಮಣಿಯಾರ್ ಅಣೆಕಟ್ಟುಗಳಿಂದ ನೀರನ್ನು ಹೊರಬಿಡಲಾಗುತ್ತಿದೆ.  

ಸಭೆ: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಲಾಯಿತು. ಕಂದಾಯ ಸಚಿವ ಕೆ. ರಾಜನ್ ಅವರು, ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಜನರಿಗೆ ಎಚ್ಚರಿಕೆಯಿಂದ ಇರಲು ಹಾಗೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

‘ನದಿ– ಗುಡ್ಡಗಾಡು ಪ್ರದೇಶ ಹಾಗೂ ಸಮುದ್ರತೀರದ ಪ್ರದೇಶಗಳಿಗೆ ಪ್ರಯಾಣಿಸಬಾರದು. ಜನರು ಎಚ್ಚರಿಕೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT