ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರ ಖಾತೆ ವಿವರ ನೀಡಿದ ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರ

Last Updated 11 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ನವದೆಹಲಿ/ಬರ್ನೆ: ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ವಿವರವನ್ನು ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರವು ಭಾರತ ಸರ್ಕಾರಕ್ಕೆ ನೀಡಿದೆ.

ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರವು ಈವರೆಗೆ ಮೂರು ಬಾರಿ ಈ ರೀತಿಯ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ.

ಸ್ವಿಟ್ಜರ್‌ಲ್ಯಾಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಹಲವು ದೇಶಗಳಿಗೆ 2019ರಿಂದ ಈ ಮಾಹಿತಿ ನೀಡುತ್ತಿದೆ.

ಈ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂಬ ಷರತ್ತಿನ ಮೇಲೆ ಈ ಮಾಹಿತಿ ನೀಡಲಾಗುತ್ತದೆ. ಈ ಬಾರಿ 96 ದೇಶದ ಪ್ರಜೆಗಳು ಸ್ವಿಸ್ ಬ್ಯಾಂಕ್‌ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ವಿವರವನ್ನು ನೀಡಲಾಗಿದೆ. ಒಟ್ಟು 33 ಲಕ್ಷ ಖಾತೆಗಳ ವಿವರವನ್ನು ಈ ದೇಶಗಳಿಗೆ ನೀಡಲಾಗಿದೆ.

ಈ 96 ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಮೂರೂ ವರ್ಷಗಳಲ್ಲಿ ಸ್ವಿಟ್ಜರ್‌ಲ್ಯಾಂಡ್‌ ಈವರೆಗೆ 100 ಭಾರತೀಯ ಸ್ವಿಸ್ ಖಾತೆಗಳ ವಿವರವನ್ನು ಭಾರತದೊಂದಿಗೆ ಹಂಚಿಕೊಂಡಿದೆ. ರಾಜಕಾರಣಿಗಳು, ಉದ್ಯಮಿಗಳು, ಕೆಲವು ಟ್ರಸ್ಟ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳ ವಿವರವನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಖಾತೆಗಳಲ್ಲಿನ ಠೇವಣಿ, ಹಣ ವರ್ಗಾವಣೆಯ ವಿವರಗಳನ್ನೂ ಇದು ಒಳಗೊಂಡಿರುತ್ತದೆ. ಈ ಖಾತೆಗಳ ವಿವರವನ್ನು ಬಳಸಿಕೊಂಡು, ಅಘೋಷಿತ ಸ್ವತ್ತುಗಳನ್ನು ಹೊಂದಿರುವವರನ್ನು ಪತ್ತೆ ಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.

ಈ ಬಾರಿ ಸ್ವಿಟ್ಜರ್‌ಲ್ಯಾಂಡ್‌ ನೀಡಿರುವ ವಿವರದಲ್ಲಿ ಅಮೆರಿಕ, ಬ್ರಿಟನ್, ದಕ್ಷಿಣ ಅಮೆರಿಕದ ದೇಶಗಳು, ಆಫ್ರಿಕಾದ ರಾಷ್ಟ್ರಗಳು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸ್ವಿಸ್ ಖಾತೆಗಳ ಮಾಹಿತಿ ಇದೆ. ಖಾತೆದಾರರ ಹೆಸರು, ಖಾತೆ ಸಂಖ್ಯೆ, ವಿಳಾಸ, ಭಾರತೀಯ ವಿಳಾಸ, ತೆರಿಗೆ ಮಾಹಿತಿಯನ್ನು ಈ ವಿವರಗಳು ಒಳಗೊಂಡಿವೆ.

ಭಾರತೀಯರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹೊಂದಿರುವ ಸ್ಥಿರಾಸ್ತಿಗಳು, ಅವುಗಳಿಂದ ಬರುತ್ತಿರುವ ಆದಾಯ ಮತ್ತು ಅವುಗಳ ತೆರಿಗೆ ಮಾಹಿತಿಯನ್ನೂ ಈ ವಿವರ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT