ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ವರ್ಷಗಳ ಬಳಿಕ ಭಾರತ–ಶ್ರೀಲಂಕಾ ನಡುವೆ ದೋಣಿ ಸೇವೆ

ಶ್ರೀಲಂಕಾ ಅಂತರ್ಯುದ್ಧದ ಕಾರಣದಿಂದ ನಾಲ್ಕು ದಶಕಗಳ ಹಿಂದೆ ಸ್ಥಗಿತವಾಗಿದ್ದ ಸೇವೆ
Published 14 ಅಕ್ಟೋಬರ್ 2023, 15:32 IST
Last Updated 14 ಅಕ್ಟೋಬರ್ 2023, 15:32 IST
ಅಕ್ಷರ ಗಾತ್ರ

ನಾಗಪಟ್ಟಿಣಂ/ನವದೆಹಲಿ (ಪಿಟಿಐ): ಶ್ರೀಲಂಕಾದ ಅಂತರ್ಯುದ್ಧದ ಕಾರಣದಿಂದಾಗಿ 40 ವರ್ಷಗಳ ಹಿಂದೆ ರದ್ದಾಗಿದ್ದ ಶ್ರೀಲಂಕಾ– ಭಾರತ ನಡುವಣ ಪ್ರಯಾಣಿಕ ದೋಣಿ ಸಂಚಾರ ಸೇವೆ ಶನಿವಾರ ಪುನರಾರಂಭಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದಲೇ ವರ್ಚುವಲ್‌ ಆಗಿ ಪ್ರಯಾಣಿಕ ದೋಣಿಗೆ ಚಾಲನೆ ನೀಡಿದರು. 

ತಮಿಳುನಾಡಿನ ನಾಗಪಟ್ಟಿಣಂ ಮತ್ತು ಉತ್ತರ ಶ್ರೀಲಂಕಾದ ಜಾಫ್ನಾ ಬಳಿಯ ಕಂಕಸಂತುರೈ ನಡುವಣ ದೋಣಿ ಸೇವೆಯು ಎರಡು ದೇಶಗಳ ಪ್ರಾಚೀನ ಕಡಲ ಮಾರ್ಗವನ್ನು ಪುನರ್‌ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಸ್‌ಸಿಐ) ಈ ವೇಗದ ದೋಣಿಯನ್ನು ನಿರ್ವಹಿಸುತ್ತಿದೆ. 150 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದೋಣಿಯು, ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವಿನ ಸುಮಾರು 60 ನಾಟಿಕಲ್‌ ಮೈಲು (110 ಕಿಮೀ) ದೂರವನ್ನು ಸಮುದ್ರದ ಪರಿಸ್ಥಿತಿಗಳಿಗೆ ಅನುಗುಣವಾಗಿ ಸುಮಾರು ಮೂರೂವರೆ ಗಂಟೆಗಳಲ್ಲಿ ಕ್ರಮಿಸಲಿದೆ. 

‘ಚೆರಿಯಪಾನಿ’ ಹೆಸರಿನ ದೋಣಿಯು ಮೊದಲ ಯಾನದಲ್ಲಿ ಶ್ರೀಲಂಕಾಕ್ಕೆ 50 ಪ್ರಯಾಣಿಕರೊಂದಿಗೆ ಪ್ರಯಾಣಿಸಿತು. ಸಂಜೆಯ ವೇಳೆಗೆ ಭಾರತಕ್ಕೆ ಮರಳಲಿದೆ. ಚೊಚ್ಚಲ ಯಾನದಲ್ಲಿದ್ದ ಪ್ರಯಾಣಿಕರು ಶ್ರೀಲಂಕಾಕ್ಕೆ ದೋಣಿಯಲ್ಲಿ ತೆರಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಭಾರತದ ರಾಮೇಶ್ವರಂ- ಶ್ರೀಲಂಕಾದ ತಲೈಮನ್ನಾರ್ ನಡುವಿನ ಸಾಂಪ್ರದಾಯಿಕ ಮಾರ್ಗ ಸೇರಿದಂತೆ ಇತರ ಬಂದರುಗಳ ನಡುವೆ ದೋಣಿ ಸಂಚಾರ ಸೇವೆಗಳನ್ನು ಪ್ರಾರಂಭಿಸಲು ಎರಡೂ ದೇಶಗಳು ಕಾರ್ಯೋನ್ಮುಕವಾಗಿವೆ
– ಜೈಶಂಕರ್‌ ವಿದೇಶಾಂಗ ಸಚಿವ

ಭಾರತದ ವಿಶಾಲ ಉದ್ದೇಶ :

1982ಕ್ಕೂ ಹಿಂದೆ ತಮಿಳುನಾಡಿನ ತೂತ್ತುಕುಡಿ ಚೆನ್ನೈ ಮತ್ತು ಕೊಲಂಬೊ ನಡುವೆ ಇಂಡೋ-ಸಿಲೋನ್ ಎಕ್ಸ್‌ಪ್ರೆಸ್ ದೋಣಿ ಸಂಚಾರ ಸೇವೆ ಇತ್ತು. ಪ್ರಾಚೀನವಾದ ಈ ಮಾರ್ಗವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಸದ್ಯ ಹೊಸ ದೋಣಿ ಸೇವೆ ಯೋಜನೆಯು ಒಳಗೊಂಡಿದೆ. ಜತೆಗೆ ಭಾರತದ ಈ ಪ್ರಯತ್ನವು ನೆರೆಹೊರೆಯವರೊಂದಿಗೆ ಮತ್ತು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸಂಪರ್ಕವನ್ನು ಬಲಪಡಿಸುವ ವಿಶಾಲ ಉದ್ದೇಶವನ್ನು ಒಳಗೊಂಡಿದೆ.  ದೋಣಿ ಸಂಚಾರ ಸೇವೆ ಪ್ರಾರಂಭಿಸುವ ಸಲುವಾಗಿ ನಾಗಪಟ್ಟಿಣಂ ಬಂದರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತ ಸರ್ಕಾರವು ತಮಿಳುನಾಡಿಗೆ ನೆರವು ನೀಡುತ್ತಿದೆ. ಅಂತೆಯೇ ಶ್ರೀಲಂಕಾ ಸರ್ಕಾರವು ಕಂಕಸಂತುರೈ ಬಂದರಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT