ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ವಿಷಯವೂ ಕೆಲವೊಮ್ಮೆ ರಾಜಕೀಯವಾಗುತ್ತದೆ: ನಿವೃತ್ತ ನ್ಯಾಯಮೂರ್ತಿ ಕೌಲ್

Published 30 ಡಿಸೆಂಬರ್ 2023, 13:00 IST
Last Updated 30 ಡಿಸೆಂಬರ್ 2023, 13:00 IST
ಅಕ್ಷರ ಗಾತ್ರ

ನವದೆಹಲಿ: ‘ವಾಯು ಮಾಲಿನ್ಯವು ಕೆಲವೊಮ್ಮೆ ರಾಜಕೀಯ ಸ್ವರೂಪವನ್ನೂ ಪಡೆದುಕೊಳ್ಳುತ್ತವೆ. ಆದರೆ ನ್ಯಾಯಾಲಯಗಳು ಕಾರ್ಯಾಂಗದ ಕೆಲಸ ಮಾಡದೇ, ಅವರವರ ಕೆಲಸವನ್ನು ಅವರೇ ನಿರ್ವಹಿಸುವಂತೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಭಿಪ್ರಾಯಪಟ್ಟರು.

ಡಿ. 25ರಂದು ಸೇವಾ ನಿವೃತ್ತರಾದ ನ್ಯಾ. ಕೌಲ್ ಅವರು ದೆಹಲಿಯ ವಾಯು ಮಾಲಿನ್ಯ ಕುರಿತು ಹೊರಡಿಸಿದ ಆದೇಶ ಹೊರಡಿಸಿದ್ದರು.

‘ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಕೆಲಸಗಳು ಆಗಿವೆ. ಆದರೆ ಈಗಲೂ ಕೈಗೊಳ್ಳಬೇಕಾದ ಬಹಳಷ್ಟು ಕ್ರಮಗಳು ಬಾಕಿ ಇವೆ. ಆದರೆ ವಾಯುಮಾಲಿನ್ಯದಂತ ವಿಷಯಗಳೂ ಕೆಲವೊಮ್ಮೆ ರಾಜಕೀಯ ವಿಷಯಗಳಾಗುವುದೇ ಇದರ ಮೂಲ ಸಮಸ್ಯೆ’ ಎಂದರು.

‘ಕೇಂದ್ರ ಸರ್ಕಾರವು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಭೆಗಳನ್ನು ನಡೆಸಿತು. ಆದರೆ ನ್ಯಾಯಾಲಯಗಳು ಅಧಿಕಾರಿಗಳ ಕೆಲಸ ಮಾಡಬಾರದು. ಬದಲಿಗೆ, ಅಧಿಕಾರಿಗಳು ಕೆಲಸ ಮಾಡುವಂತೆ ಅವರನ್ನು ನೂಕಬೇಕು’ ಎಂದರು.

‘ಒಂದೊಮ್ಮೆ ಈ ವಿಷಯವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳೂ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ಆದಲ್ಲಿ ಮುಂದಿನ ವರ್ಷದ ಚಳಿಗಾಲದ ಹೊತ್ತಿಗೆ ದೆಹಲಿಯ ಗಾಳಿಯ ಗುಣಮಟ್ಟ ಉತ್ತಮವಾಗಬಹುದು’ ಎಂದು ನ್ಯಾ. ಕೌಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕಸ ಸುಡುವುದು, ವಾಹನಗಳಿಂದ ಹೊರಸೂಸುವ ಹೊಗೆ ಜತೆಗೆ ಕೃಷಿ ತ್ಯಾಜ್ಯ ಸುಡುವುದು ಮಾಲಿನ್ಯಕ್ಕೆ ಶೇ 36ರಷ್ಟು ಕೊಡುಗೆ ನೀಡಿದೆ. ಕಠಿಣ ಕ್ರಮ ಕೈಗೊಂಡು ಕೃಷಿ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಬೇಕು. ಎಲ್ಲಾ ಸಮಸ್ಯೆಗೂ ಪರಿಹಾರವಿದೆ. ಆದರೆ ಅದನ್ನು ಜಾರಿಗೊಳಿಸಲು ಮನಸ್ಸಿರಬೇಕಷ್ಟೇ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT