ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶ: ಅಧಿವೇಶನ ವೇಳೆ ಗಲಾಟೆ ಮಾಡಿದ ಆರೋಪ, 7 BJP ಶಾಸಕರಿಗೆ ನೋಟಿಸ್

Published 5 ಮಾರ್ಚ್ 2024, 13:22 IST
Last Updated 5 ಮಾರ್ಚ್ 2024, 13:22 IST
ಅಕ್ಷರ ಗಾತ್ರ

ಶಿಮ್ಲಾ: ವಿಧಾನಸಭೆ ಅಧಿವೇಶನದ ವೇಳೆ ಗಲಾಟೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪಕ್ಷದ 7 ಶಾಸಕರು ನೋಟಿಸ್‌ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಜೈ ರಾಮ್‌ ರಮೇಶ್‌ ಮಂಗಳವಾರ ಹೇಳಿದ್ದಾರೆ.

‘ಪಕ್ಷದ ಶಾಸಕರು ತಮಗೆ ನೀಡಲಾಗಿರುವ ನೋಟಿಸ್‌ಗಳಿಗೆ ಉತ್ತರಿಸುವರು’ ಎಂದು ಜೈ ರಾಮ್‌ ಠಾಕೂರ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಪಕ್ಷ ಬಹುಮತ ಕಳೆದುಕೊಂಡಿದೆ. ಹೀಗಾಗಿ, ಹಕ್ಕುಬಾಧ್ಯತಾ ಸಮಿತಿ ಮೂಲಕ ಬಿಜೆಪಿಯ ಏಳು ಜನ ಶಾಸಕರಿಗೆ ನೋಟಿಸ್‌ ನೀಡುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಬಜೆಟ್‌ಗೆ ಅನುಮೋದನೆ ಪಡೆಯುವುದಕ್ಕೂ ಮುನ್ನವೇ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಆರು ಜನ ಕಾಂಗ್ರೆಸ್‌ ಹಾಗೂ ಮೂವರು ಪಕ್ಷೇತರ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ ಸರ್ಕಾರಕ್ಕೆ ಬಹುಮತ ಇರಲಿಲ್ಲ’ ಎಂದೂ ಹೇಳಿದ್ದಾರೆ.

ಕೆಲ ಬಿಜೆಪಿ ಶಾಸಕರಿಗೆ ನೋಟಿಸ್‌ ನೀಡಿರುವುದನ್ನು ವಿಧಾನ ಸಭಾಧ್ಯಕ್ಷ ಕುಲದೀಪ್‌ ಸಿಂಗ್ ಪಠಾನಿಯಾ ಅವರು ದೃಢಪಡಿಸಿದ್ದು, ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಬಿಜೆಪಿಯ ಎಷ್ಟು ಜನ ಶಾಸಕರಿಗೆ ನೋಟಿಸ್‌ ನೀಡಲಾಗಿದೆ ಎಂಬ ಬಗ್ಗೆ ಕುಲದೀಪ್‌ ಸಿಂಗ್ ಮಾಹಿತಿ ನೀಡಿಲ್ಲ.

‘ಬಿಜೆಪಿ ಶಾಸಕರು ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದ್ದರು. ಆ ಮೂಲಕ ಹಕ್ಕುಚ್ಯುತಿಯಾಗಿದೆಯಲ್ಲದೇ, ನಿಯಮಗಳು ಹಾಗೂ ಸಾಂವಿಧಾನಿಕ ಅವಕಾಶಗಳ ಉಲ್ಲಂಘನೆ ಮಾಡಿರುವುದರಿಂದ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ನೋಟಿಸ್‌ ನೀಡಲಾಗಿದೆ’ ಎಂದೂ ವಿಧಾನ ಸಭಾಧ್ಯಕ್ಷರು ತಿಳಿಸಿದ್ದಾರೆ.

ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕೆಲ ಕಾಂಗ್ರೆಸ್‌ ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್‌ ಅವರಿಗೆ ಮತ ಹಾಕುವ ಮೂಲಕ ಅಡ್ಡ ಮತದಾನ ಮಾಡಿದ್ದರು. ಮಾರನೇ ದಿನ ವಿಧಾನಸಭೆಯಲ್ಲಿ ಗದ್ದಲ ನಡೆಸಿದ ವಿಚಾರವಾಗಿ 15 ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ಗಲಾಟೆ ಕಾರಣಕ್ಕೆ ಬಿಜೆಪಿ ಶಾಸಕರಿಗೆ ನೋಟಿಸ್‌ ನೀಡಲಾಗಿದೆ.

‘ಸುಪ್ರೀಂ’ ಮೆಟ್ಟಿಲೇರಿದ 6 ಕಾಂಗ್ರೆಸ್‌ ಶಾಸಕರು

ನವದೆಹಲಿ(ಪಿಟಿಐ): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಅನರ್ಹಗೊಂಡಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ ಆರು ಜನ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಧಾನ ಸಭಾಧ್ಯಕ್ಷ ಕುಲದೀಪ್‌ ಸಿಂಗ್‌ ಪಠಾನಿಯಾ ಅವರು ತಮ್ಮನ್ನು ಅನರ್ಹಗೊಳಿಸಿ ಫೆ.29ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಇವರು ಅರ್ಜಿ ಸಲ್ಲಿಸಿದ್ದಾರೆ. ಅನರ್ಹ ಶಾಸಕರಾದ ರಾಜಿಂದರ್‌ ರಾಣಾ ಸುಧೀರ್‌ ಶರ್ಮ ಇಂದರ್‌ ದತ್ತ ಲಖನ್‌ಪಾಲ್ ದೇವೀಂದ್ರ ಕುಮಾರ್‌ ಭೂತೂ ರವಿ ಠಾಕೂರ್‌ ಹಾಗೂ ಚೇತನ್ ಶರ್ಮ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT