ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ–ಪತ್ನಿ ಸಂಬಂಧ: ಹೈಕೋರ್ಟ್ ಆದೇಶದಲ್ಲಿ ಧಾರ್ಮಿಕ ಪುಸ್ತಕ ಉಲ್ಲೇಖ

Published 25 ಜನವರಿ 2024, 14:15 IST
Last Updated 25 ಜನವರಿ 2024, 14:15 IST
ಅಕ್ಷರ ಗಾತ್ರ

ರಾಂಚಿ: ಪತ್ನಿಯೊಬ್ಬಳು ಪತಿಯಿಂದ ಜೀವನಾಂಶ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದ ಆದೇಶ ನೀಡುವಾಗ ಜಾರ್ಖಂಡ್‌ ಹೈಕೋರ್ಟ್‌ ಧಾರ್ಮಿಕ ಪುಸ್ತಕಗಳಲ್ಲಿ ಇರುವ ಅಂಶಗಳನ್ನು ಉಲ್ಲೇಖಿಸಿದೆ.

ಈ ಆದೇಶವು ಪತಿ, ಪತ್ನಿ ನಡುವಿನ ಸಂಬಂಧ ಹೇಗಿರಬೇಕು ಎಂಬುದನ್ನು ಹೇಳುತ್ತದೆ. ಅಷ್ಟೇ ಅಲ್ಲದೆ, ವಿವಾಹಿತರ ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಕೂಡ ವಿವರಿಸಿದೆ. ಮದುವೆಯ ನಂತರದಲ್ಲಿ ಹೆಣ್ಣನ್ನು ಗಂಡನ ಮನೆಯವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ವಿವರಿಸಲು ನ್ಯಾಯಮೂರ್ತಿ ಸುಭಾಷ್ ಚಂದ್ ಅವರು ಸುಪ್ರೀಂ ಕೋರ್ಟ್‌ನ ಮಾತುಗಳನ್ನು ಉಲ್ಲೇಖಿಸಿದ್ದಾರೆ.

ಋಗ್ವೇದ, ಯಜುರ್ವೇದ, ಮನುಸ್ಮೃತಿಯಲ್ಲಿ ಇರುವ ಸಾಲುಗಳನ್ನು ಮತ್ತು ತೆರೆಸಾ ಚಾಕೊ ಅವರ ‘ಇಂಟ್ರಡಕ್ಷನ್ ಟು ಫ್ಯಾಮಿಲಿ ಲೈಫ್ ಎಜುಕೇಷನ್’ ಎಂಬ ಪುಸ್ತಕದ ಸಾಲುಗಳನ್ನು ಕೂಡ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪಾಶ್ಚಿಮಾತ್ಯ ಜಗತ್ತಿನಲ್ಲಿ ಮದುವೆಯ ನಂತರದಲ್ಲಿ ಮಗ, ಕುಟುಂಬದಿಂದ ಬೇರೆಯಾಗುತ್ತಾನೆ. ಆದರೆ ಭಾರತದಲ್ಲಿ ಹೀಗೆ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಚಂದ್ ಅವರು ಹೇಳಿದ್ದಾರೆ. ಪ್ರತ್ಯೇಕವಾಗಲು ಬಲವಾದ ಹಾಗೂ ಸಮರ್ಥನೀಯವಾದ ಕಾರಣಗಳು ಇಲ್ಲದಿದ್ದರೆ, ಮದುವೆಯ ನಂತರ ಪತ್ನಿಯು ತನ್ನ ಪತಿಯ ಕುಟುಂಬದ ಜೊತೆ ಇರಬೇಕು ಎಂದು ಬಯಸಲಾಗುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

ಪುರುಷ ಮತ್ತು ಮಹಿಳೆ ಮದುವೆಯ ನಂತರದಲ್ಲಿ ಹೇಗೆ ವರ್ತಿಸಬೇಕು ಎಂಬ ವಿಚಾರವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿರೀಕ್ಷೆಗಳು ಇರುತ್ತವೆ ಎಂದು ನ್ಯಾಯಮೂರ್ತಿ ಚಂದ್ ಅವರು ಚಾಕೊ ಅವರ ಪುಸ್ತಕವನ್ನು ಉಲ್ಲೇಖಿಸಿ ಹೇಳಿದ್ದಾರೆ. ಕುಟುಂಬದ ಪ್ರತಿ ಸದಸ್ಯನೂ ತನ್ನ ಹೊಣೆಯನ್ನು ನಿಭಾಯಿಸಿದರೆ ಮಾತ್ರ ಮದುವೆಯ ಉದ್ದೇಶ ಈಡೇರುತ್ತದೆ ಎಂದಿದ್ದಾರೆ.

ಪತಿಯ ಪಾತ್ರ ಏನಿರಬೇಕು ಎಂಬುದನ್ನು ಆದೇಶದಲ್ಲಿ ಹೇಳಲಾಗಿದೆ. ಪತಿಯು ಲೈಂಗಿಕತೆಯ ವಿಚಾರದಲ್ಲಿ ಸಂಗಾತಿಯಾಗಿರಬೇಕು, ಆತ ಜೊತೆಗಾರನಾಗಿ, ನಿಷ್ಠೆ ಹೊಂದಿದವನಾಗಿ, ನಿರ್ಧಾರ ಕೈಗೊಳ್ಳುವವನಾಗಿ ಇರಬೇಕು. ಪತಿಯು ಪತ್ನಿಗೆ ಭಾವನಾತ್ಮಕ ಬೆಂಬಲ ನೀಡುವವನಾಗಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಪತ್ನಿಯು ಮಮತೆ ತುಂಬಿದ ಜೊತೆಗಾರ್ತಿ ಆಗಿರಬೇಕು, ಲೈಂಗಿಕತೆಯ ವಿಚಾರದಲ್ಲಿ ಒಳ್ಳೆಯ ಸಂಗಾತಿಯಾಗಿರಬೇಕು, ನಿಷ್ಠೆ ಹೊಂದಿರುವವಳಾಗಿ, ಸಾಮಾಜಿಕ ಕೆಲಸಗಳಲ್ಲಿ ಪತಿಗೆ ಸಹಕಾರ ನೀಡಬೇಕು ಎಂದು ಹೇಳಲಾಗಿದೆ. ದಂಪತಿಯ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಹೊಣೆಯನ್ನು ಪತ್ನಿ ವಹಿಸಿಕೊಳ್ಳಬೇಕು, ಪತಿಯ ಕೆಲಸಗಳಲ್ಲಿ ಆಸಕ್ತಿ ತೋರಿಸಬೇಕು, ಅವನ ಕೆಲಸಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಆತನಿಗೆ ಬೌದ್ಧಿಕ ಸಾಹಚರ್ಯ ಒದಗಿಸಬೇಕು ಎಂದು ಕೂಡ ವಿವರಿಸಲಾಗಿದೆ.

ರುದ್ರ ನಾರಾಯಣ ರೇ ಅವರು ತಮ್ಮ ಪತ್ನಿ ಮತ್ತು ಮಗನಿಗೆ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯವೊಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರೇ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಜನವರಿ 22ರಂದು ಆದೇಶ ಹೊರಡಿಸಿದ್ದ ನ್ಯಾಯಮೂರ್ತಿ ಚಂದ್ ಅವರು ನಂತರ ಅದರಲ್ಲಿ ತುಸು ಬದಲಾವಣೆ ಮಾಡಿದ್ದಾರೆ. ಪತ್ನಿಗೆ ಜೀವನಾಂಶ ಕೊಡಬೇಕು ಎಂದಿದ್ದನ್ನು ರದ್ದುಪಡಿಸಿದ್ದಾರೆ. ಆದರೆ ಇನ್ನೂ 18 ವರ್ಷ ವಯಸ್ಸಾಗಿರದ ಮಗನಿಗೆ ತಿಂಗಳಿಗೆ ₹15 ಸಾವಿರ ಬದಲು ₹25 ಸಾವಿರ ಜೀವನಾಂಶ ನೀಡಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT