ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.‍ಪಿ.ನಡ್ಡಾ ಆಯ್ಕೆ: ಶಾ ಅಧಿಕಾರ ಹಸ್ತಾಂತರ

Last Updated 20 ಜನವರಿ 2020, 18:29 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ನೂತನ ಅಧ್ಯಕ್ಷರಾಗಿ 59 ವರ್ಷದ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆಯ ಉಸ್ತುವಾರಿಯಾಗಿದ್ದ ಬಿಜೆಪಿ ನಾಯಕ ರಾಧಾಮೋಹನ್ ಸಿಂಗ್ ಅವರು ನಡ್ಡಾ ಅವರ ನೇಮಕಾತಿಯನ್ನು ಘೋಷಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ನಡ್ಡಾ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಕಳೆದ ಜೂನ್‌ನಲ್ಲಿ ಶಾ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡ್ಡಾ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿತ್ತು. ಇದರಿಂದಾಗಿ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿರೀಕ್ಷೆ ಇತ್ತು.

ನಡ್ಡಾ ನೇಮಕಾತಿಯನ್ನು ಸ್ವಾಗತಿಸಿರುವ ಪಕ್ಷದ ಮುಖಂಡರು, ಅವರ ನೇತೃತ್ವದಲ್ಲಿ ಪಕ್ಷ ಹೊಸ ಗೆಲುವುಗಳನ್ನು ಸಾಧಿಸುವ ಭರವಸೆ ಇದೆ ಎಂದರು.

ಬಿಜೆಪಿ ಹೊಸ ಎತ್ತರಕ್ಕೆ: ಪ್ರಧಾನಿಮೋದಿ
ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಹೊಸ ಎತ್ತರಕ್ಕೆ ಏರುವ ಭರವಸೆ ಇದೆ’ ಎಂದರು.

‘ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ವರ್ಷಗಳಿಂದ ಶ್ರಮಿಸಿರುವ ನಡ್ಡಾ ಅವರು ಶಿಸ್ತು ಹಾಗೂ ಸಮರ್ಪಣಾ ಗುಣವುಳ್ಳ ಕಾರ್ಯಕರ್ತ. ಅವರ ವಿನಯಶೀಲ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ’ ಎಂದು ಪ್ರಧಾನಿ ಹೇಳಿದರು.

ಪಕ್ಷಕ್ಕೆ ಅಮಿತ್ ಶಾ ನೀಡಿದ ಕೊಡುಗೆಯನ್ನೂ ಇದೇ ವೇಳೆ ಪ್ರಶಂಸಿಸಿದ ಮೋದಿ, ಅವರನ್ನು ‘ಅಸಾಧಾರಣ ಕಾರ್ಯಕರ್ತ’ ಎಂದು ಬಣ್ಣಿಸಿದರು.

ದೆಹಲಿ ಚುನಾವಣೆ ಮೊದಲ ಸವಾಲು
ನಡ್ಡಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಬೇಕಿದೆ. ಫೆ.7ರಂದು ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಅವರಿಗೆ ಎದುರಾಗುವ ಮೊದಲ ಸವಾಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಗಲಿರುಳೂ ಶ್ರಮಿಸುತ್ತಿದೆ.

ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಭಾರಿ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದಿತು. ಮೋದಿ ಅವರ ಜನಪ್ರಿಯತೆಗೆ ಧಕ್ಕೆಯಾಗದೇ ಇದ್ದರೂ, 2018ರ ಅಂತ್ಯದಿಂದ ಈಚೆಗೆ ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಪಕ್ಷ ಅಧಿಕಾರ ಕಳೆದುಕೊಂಡದ್ದು, ಕೊಂಚ ಹಿನ್ನಡೆ ತಂದಿದೆ.

ಮೋದಿ ಹಾಗೂ ಶಾ ಅವರ ಪ್ರಭಾವದ ನಡುವೆ ತಮ್ಮದೇ ರೀತಿಯಲ್ಲಿ ಚುನಾವಣಾ ರಣತಂತ್ರ ರೂಪಿಸಿ, ಬಿಜೆಪಿಯ ಸಾಮರ್ಥ್ಯವನ್ನು ಹೆಚ್ಚಿಸಬೇಕಾದ ಹೊಣೆಗಾರಿಕೆ ಸಹ ನಡ್ಡಾ ಅವರ ಮೇಲಿದೆ.

*
ಹೃದಯಪೂರ್ವಕ ಅಭಿನಂದನೆಗಳು ಜೆ.ಪಿ.ನಡ್ಡಾ. ಪ್ರಧಾನಿ ಮೋದಿ ಮಾರ್ಗದರ್ಶನ ಹಾಗೂ ನಿಮ್ಮ ನಾಯಕತ್ವದಲ್ಲಿ ಬಿಜೆಪಿ ಇನ್ನಷ್ಟು ಸದೃಢವಾಗುತ್ತದೆ ಮತ್ತು ವ್ಯಾಪ್ತಿ ವಿಸ್ತರಿಸಿಕೊಳ್ಳುವ ನಂಬಿಕೆ ಇದೆ.
–ಅಮಿತ್ ಶಾ, ಕೇಂದ್ರದ ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT