ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜೊತೆ ಚುನಾವಣಾ ಮೈತ್ರಿ: ಕೇರಳ ಜೆಡಿಎಸ್‌ ನಿಲುವು ಅಸ್ಪಷ್ಟ

Published 10 ಡಿಸೆಂಬರ್ 2023, 16:25 IST
Last Updated 10 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ತಿರುವನಂತಪುರ: ಜನತಾದಳ (ಎಸ್‌) ಪಕ್ಷದ ಕೇರಳ ಘಟಕವು ಎರಡು ದೋಣಿಗಳ ಮೇಲೆ ಕಾಲಿಟ್ಟಿಂತಿದ್ದು, ಬಿಜೆಪಿ ಜೊತೆಗೆ ಮೈತ್ರಿ ಹೊಂದುವ ಪಕ್ಷದ ತೀರ್ಮಾನ ಕುರಿತಂತೆ ತನ್ನ ಅಸ್ಪಷ್ಟ ನಿಲುವನ್ನೇ ಮುಂದುವರಿಸಿದೆ.

ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಪಕ್ಷದ ರಾಷ್ಟ್ರೀಯ ವರಿಷ್ಠ ಎಚ್.ಡಿ.ದೇವೇಗೌಡ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಪಕ್ಷದ ಕೇರಳ ಘಟಕವು ಸದ್ಯ ಸಿಪಿಎಂ ನೇತೃತ್ವದ ಆಡಳಿತರೂಢ ಮೈತ್ರಿಕೂಟ ಪ್ರಜಾಸತ್ತಾತ್ಮಕ ರಂಗದ ಭಾಗವಾಗಿದೆ.

‘ಮೈತ್ರಿ ಕುರಿತಂತೆ ದೇವೇಗೌಡರ ತೀರ್ಮಾನವನ್ನು ವಿರೋಧಿಸುತ್ತೇವೆ’ ಎಂದು ಕೇರಳ ಘಟಕದ ನಾಯಕರು ಈಗಾಗಲೇ ಪ್ರಕಟಿಸಿದ್ದಾರೆ. ಆದರೂ, ದೇವೇಗೌಡರ ನೇತೃತ್ವದ ಜೆಡಿಎಸ್‌ ಜೊತೆಗೇ ಒಡನಾಟವನ್ನು ಹೊಂದಿದ್ದಾರೆ.

‘ಗೌಡರ ನಿರ್ಧಾರ ಪಕ್ಷದ ಅಧಿಕೃತ ತೀರ್ಮಾನವಲ್ಲ. ಹೀಗಾಗಿ, ನಮ್ಮದೇ ಮೂಲ ಪಕ್ಷವಾಗಿ ಉಳಿಯಲಿದೆ’ ಎಂದೂ ಕೇರಳ ಘಟಕದ ನಾಯಕರು ಪ್ರತಿಪಾದಿಸಿದ್ದರು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

‘ಎನ್‌ಡಿಎ ಸೇರುವ ತೀರ್ಮಾನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೂ ಗೊತ್ತಿತ್ತು’ ಎಂದು ಹಿಂದೆ ಗೌಡರು ಹೇಳಿದ್ದರು. ಇದರ ಬೆನ್ನಲ್ಲೇ, ಈ ಮಾತನ್ನು ಪಿಣರಾಯಿ ವಿಜಯನ್‌ ಅವರು ತಳ್ಳಿಹಾಕಿದ್ದರು. 

ಕೇರಳದಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರಿದ್ದಾರೆ. ಕೆ.ಕೃಷ್ಣನ್‌ ಕುಟ್ಟಿ ಮೈತ್ರಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರೆ, ಮ್ಯಾಥ್ಯೂ ಟಿ.ಥಾಮಸ್‌ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು. ಮೈತ್ರಿ ಕುರಿತಂತೆ ಗೌಡರ ಜೊತೆಗಿನ ಸಂಘರ್ಷ ಅಥವಾ ಹೊಸ ಪಕ್ಷ ರಚಿಸುವ ಸಾಧ್ಯತೆಗಳು ಶಾಸನಸಭೆಯ ಸದಸ್ಯತ್ವ ಅನರ್ಹತೆಗೂ ದಾರಿಯಾಗಬಹುದು.

ಪಕ್ಷದ ರಾಜ್ಯ ಘಟಕದ ನಿಲುವಿನಲ್ಲಿ ಅಸ್ಪಷ್ಟತೆ ಕುರಿತು ಗಮನಸೆಳೆದಾಗ ಥಾಮಸ್‌ ಅವರು, ಭವಿಷ್ಯದ ಹೆಜ್ಜೆ ಕುರಿತೂ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು. ಇನ್ನೊಂದೆಡೆ, ಪಕ್ಷದ ನಾಯಕರಾದ ಸಿ.ಎಂ.ಇಬ್ರಾಹಿಂ ಮತ್ತು ಸಿ.ಕೆ.ನಾನು ಅವರು ಕರೆದಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಕುರಿತಂತೆಯೂ ರಾಜ್ಯ ಘಟಕವು ಅಂತರವನ್ನು ಕಾಯ್ದುಕೊಂಡಿದೆ.

ಇನ್ನೊಂದೆಡೆ, ‘ಬೆಂಗಳೂರಿನಲ್ಲಿ ಸೋಮವಾರದಂದು ನಡೆಯಲಿರುವ ಸಭೆಯಲ್ಲಿ ಕೇರಳ ಘಟಕದ ಕೆಲವು ಮುಖಂಡರೂ ಭಾಗವಹಿಸಲಿದ್ದಾರೆ’ ಎಂದು ನಾನು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT