ನವದೆಹಲಿ: ಸಂತ್ರಸ್ತ ಮಕ್ಕಳು ತನಿಖೆ, ವಿಚಾರಣೆ ಹಾಗೂ ಪುನರ್ವಸತಿ ಸಂದರ್ಭದಲ್ಲಿ ಅನುಭವಿಸುವ ಯಾತನೆ ತಗ್ಗಿಸಲು ‘ಸಂರಕ್ಷಕ’ರ ನೇಮಕ ಸೇರಿದಂತೆ ಪೋಕ್ಸೊ ಕಾಯ್ದೆಯಡಿ ಮಾರ್ಗಸೂಚಿಗಳನ್ನು ರಚಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸರ್ಕಾರೇತರ ಸಂಸ್ಥೆ ‘ಬಚಪನ್ ಬಚಾವೊ ಆಂದೋಲನ’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಹಾಗೂ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಮಾರ್ಗಸೂಚಿಗಳನ್ನು ರಚಿಸುವುದಕ್ಕೆ ಸಂಬಂಧಿಸಿ ಅಕ್ಟೋಬರ್ 4ರ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (ಎನ್‌ಸಿಪಿಸಿಆರ್) ನಿರ್ದೇಶನ ನೀಡಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.
ಕೋರ್ಟ್ ಹೇಳಿದ್ದೇನು?: ‘ಪೋಕ್ಸೊ ನಿಯಮಗಳಲ್ಲಿ ಹೇಳಿರುವಂತೆ, ಸಂತ್ರಸ್ತ ಮಕ್ಕಳ ಪುನರ್ವಸತಿಯಲ್ಲಿ ಸಂರಕ್ಷಕರ ಪಾತ್ರವು ಮಹತ್ವದ್ದಾಗಿದೆ. ಆದರೆ, ಸಂರಕ್ಷಕರ ನೇಮಿಸಬೇಕು ಎಂಬ ಆಶಯವು ಇನ್ನೂ ಈಡೇರಿಲ್ಲ ಅಥವಾ ಭಾಗಶಃ ಇಲ್ಲವೇ ತಾತ್ಪೂರ್ತಿಕವಾಗಿ ಈಡೇರಿದಂತಾಗಿದೆ. ಸಂತ್ರಸ್ತರಿಗೆ ಹಾಗೂ ಅವರ ಕುಟುಂಬಗಳಿಗೆ ನೆರವು ನೀಡುವುದಕ್ಕೆ ಮಿತಿ ಹೇರಿದಂತಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
‘ತಮ್ಮ ಮೇಲೆ ನಡೆಯುವ ದೌರ್ಜನ್ಯ ಮಾತ್ರ ಮಕ್ಕಳಲ್ಲಿ ಭೀತಿ, ಅಭದ್ರತೆ ಭಾವನೆ ಮೂಡಿಸುವುದಿಲ್ಲ. ನಂತರದ ದಿನಗಳಲ್ಲಿ ಸಿಗದ ಬೆಂಬಲದ ಕೊರತೆ ಅವರ ನೋವು ಉಲ್ಬಣಗೊಳ್ಳುವಂತೆ ಮಾಡುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
‘ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದಾಗ ಇಲ್ಲವೇ ಶಿಕ್ಷೆಯ ಪ್ರಮಾಣ ಹೆಚ್ಚಿಸಿದರೆ ಮಾತ್ರ ನಿಜವಾದ ನ್ಯಾಯ ನೀಡಿದಂತೆ ಆಗುವುದಿಲ್ಲ. ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳು ಸಂತ್ರಸ್ತರಿಗೆ ಬೆಂಬಲ, ಭದ್ರತೆಯನ್ನು ಖಾತ್ರಿಪಡಿಸುವುದು ಅಷ್ಟೇ ಮುಖ್ಯ’ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.