ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆ ಪದಕ್ಕೆ ಪರ್ಯಾಯವಾಗಿ ‘ಗಂಗಾ ಭಾಗೀರಥಿ’: ಮಹಾರಾಷ್ಟ್ರದಲ್ಲಿ ಪರ–ವಿರೋಧ ಚರ್ಚೆ

Last Updated 14 ಏಪ್ರಿಲ್ 2023, 8:04 IST
ಅಕ್ಷರ ಗಾತ್ರ

ಮುಂಬೈ : ವಿಧವೆಯರಿಗೆ ಗೌರವ ಕೊಡುವ ಉದ್ದೇಶದಿಂದ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ವಿಧವೆ ಪದಕ್ಕೆ ಪರ್ಯಾಯವಾಗಿ ‘ಗಂಗಾ ಭಾಗೀರಥಿ‘ ಬಳಸುವಂತೆ ಪ್ರಸ್ತಾಪ ಕಳುಹಿಸಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಈ ಪ್ರಸ್ತಾಪ ವಿರೋಧಿಸಿದರೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಸ್ವಾಗತಿಸಿದ್ದಾರೆ.

ಪತಿ ಮರಣ ಹೊಂದಿದ ನಂತರ ಮಹಿಳೆಯರನ್ನು ವಿಧವೆಯೆಂದು ಗುರುತಿಸಲಾಗುತ್ತದೆ. ವಿಧವಾ ಮಹಿಳೆಯರನ್ನು ಗುರುತಿಸಲು ಒಂದು ಗೌರವಾನ್ವಿತ ಪದ ಹುಡುಕುವಂತೆ ಈ ಹಿಂದೆ ಮಹಿಳಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಜೊತೆಗೆ ಪೂರ್ಣಾಂಗಿ ಎಂಬ ಪದವನ್ನೂ ಶಿಫಾರಸು ಮಾಡಿತ್ತು. ಸರ್ಕಾರ ಈಗ ತನ್ನ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಸರ್ಕಾರದ ನಿರ್ಧಾರವನ್ನು ಮಹಿಳಾ ಆಯೋಗ ಸ್ವಾಗತಿಸಿದೆ.

‘ಈ ವಿಷಯವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರಿಗೆ ಧನ್ಯವಾದ ಹೇಳುತ್ತೇನೆ.ಸರ್ಕಾರ ತೆಗೆದುಕೊಂಡ ಈ ನಿರ್ಧಾರವು ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ‘ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಟ್ವೀಟ್‌ ಮಾಡಿದ್ದಾರೆ.

‘ಇದು ಭಾರತೀಯ ಜನತಾ ಪಕ್ಷದ (ಬಿಜೆಪಿ) ‘ಮನುವಾದಿ‘ ಚಿಂತನೆಯನ್ನು ಬಹಿರಂಗಪಡಿಸಿದೆ. ಈ ಮೂಲಕ ವಿಧವೆಯರನ್ನು ಅವಮಾನಿಸಿದೆ‘ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎನ್‌ಸಿಪಿ ಪಕ್ಷದ ನಾಯಕಿ ಸುಪ್ರಿಯಾ ಸುಳೆ, ಸರ್ಕಾರ ತಕ್ಷಣ ಈ ಪ್ರಸ್ತಾಪವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ‘ರಾಜಮಾತಾ ಜೀಜಾಬಾಯಿ, ಅಹಲ್ಯಾಬಾಯಿ ಹೋಳ್ಕರ್, ಸಾವಿತ್ರಿಬಾಯಿ ಫುಲೆಯಂತಹ ಪ್ರತಿಭಾನ್ವಿತ ಮಹಿಳೆಯರು ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ನಿರ್ಧರಿಸುವಾಗ, ಸರ್ಕಾರವು ವಿಧವೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳು(ಎನ್‌ಜಿಓ), ವ್ಯಕ್ತಿಗಳು ಮತ್ತು ಇತರ ಸಂಘಟನೆಗಳೊಂದಿಗೆ ಸಮಾಲೋಚಿಸಬೇಕಿತ್ತು’ ಎಂದು ಕಿಡಿಕಾರಿದ್ದಾರೆ.

ವಿಧವೆಯರಿಗೆ ಸಂಬಂಧಿಸಿದ ಪದ್ಧತಿಗಳನ್ನು ಕೊನೆಗಾಣಿಸುವ ಕುರಿತು ಹೋರಾಟ ಮಾಡುತ್ತಾ ಬಂದಿರುವ ಪ್ರಮೋದ ಜಿಂಜಾಡೆ, ‘ವಿಧವೆಯನ್ನು'ಗಂಗಾ ಭಾಗೀರಥಿ' ಎಂದು ಕರೆಯುವ ಮೂಲಕ ಮತ್ತೆ ಅವರನ್ನು ಹಿನ್ನೆಡೆಗೆ ತಳ್ಳುತ್ತಿದ್ದೇವೆ. ಇದರ ಬದಲಿಗೆ ವಿಧವಾ ಮಹಿಳೆಯರನ್ನು'ಶ್ರೀಮತಿ'ಎಂದು ಕರೆಯಬೇಕು" ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT