ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪಿತನಿಗೆ ಶಿರಬಾಗಿ ನಮಿಸಿದ ಭಾರತ

ದೇಶದಾದ್ಯಂತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ, ರಾಷ್ಟ್ರಪತಿ, ಪ್ರಧಾನಿಯಿಂದ ಗೌರವಾರ್ಪಣೆ
Last Updated 2 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮ ಗಾಂಧಿಯ 150ನೇ ಜನ್ಮದಿನದ ಆಚರಣೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಬುಧವಾರ ದೇಶದಾದ್ಯಂತ ರಾಜಕೀಯ ಪಕ್ಷಗಳು, ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತನಿಗೆ ಗೌರವ ಸಮರ್ಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಬುಧವಾರ ಮುಂಜಾನೆ ಇವರು ದೆಹಲಿಯಲ್ಲಿರುವ ರಾಜಘಾಟ್‌ಗೆ ತೆರಳಿ, ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.

ಮಾಜಿ ಪ್ರಧಾನಿ ಮನ ಮೋಹನ್‌ ಸಿಂಗ್‌,ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ, ಕೇಂದ್ರದ ಸಚಿವರಾದ ಪೀಯೂಷ್‌ ಗೋಯಲ್‌, ಹರ್‌ದೀಪ್‌ ಸಿಂಗ್‌ ಪುರಿ, ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮುಂತಾದವರು ರಾಜ ಘಾಟ್‌ನಲ್ಲಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿ ದರು. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ವಿವಿಧ ರಾಜಕೀಯ ನಾಯಕರು ಪಾಲ್ಗೊಂಡು ಗೌರವ ಸಲ್ಲಿಸಿದರು.

ನೆಲ್ಸನ್‌ ಮಂಡೇಲಾ, ಮಾರ್ಟಿನ್‌ ಲೂಥರ್‌ ಕಿಂಗ್‌, ದಲೈಲಾಮಾ ಮುಂತಾದ ದಿಗ್ಗಜರನ್ನು ಪ್ರಭಾವಿಸಿದ್ದ ಶಾಂತಿದೂತ ಗಾಧೀಜಿಯ 150ನೇ ಜನ್ಮದಿನವನ್ನು ಆಚರಿಸಲು ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಈ ಸಂದರ್ಭದಲ್ಲಿ ಟ್ವಿಟರ್‌ ಮೂಲಕ ವಿಡಿಯೊ ಸಂದೇಶ ನೀಡಿದ ಪ್ರಧಾನಿ ಮೋದಿ ಅವರು, ‘ಮಾನವೀ ಯತೆಗೆ ಗಾಂಧೀಜಿ ನೀಡಿದ್ದ ಶಾಶ್ವತ ಕೊಡುಗೆಗಾಗಿ ರಾಷ್ಟ್ರವು ಅವರನ್ನು ಗೌರವದಿಂದ ಸ್ಮರಿಸುತ್ತದೆ’ ಎಂದಿದ್ದಾರೆ.

ಗಾಂಧಿಜಯಂತಿ ರಾಜಕೀಯ: ಗಾಂಧಿ ಪರಂಪರೆಯ ಲಾಭ ಪಡೆಯುವ ಉದ್ದೇಶಕ್ಕೂ ರಾಜಕೀಯ ಪಕ್ಷಗಳು ಈ ಸಂದರ್ಭವನ್ನು ಬಳಸಿಕೊಂಡವು. ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿ ಯವರು ‘ಸಂಕಲ್ಪ ಯಾತ್ರೆ’ ಆರಂಭಿಸಿ ದರೆ, ಕಾಂಗ್ರೆಸ್‌ ಪಕ್ಷದವರು, ಮುಖಂಡ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೆಹಲಿ ಯಲ್ಲಿ ‘ಗಾಂಧಿ ಸಂದೇಶ ಯಾತ್ರೆ’ ನಡೆಸಿದರು.

ಬಿಜೆಪಿಯ ‘ಸಂಕಲ್ಪಯಾತ್ರೆ’ ಗೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ಒಂದೇಬಾರಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್‌ನ ಬಳಕೆ ನಿಲ್ಲಿಸುವಂತೆ ಕರೆನೀಡಿ ದರಲ್ಲದೆ, ಇದನ್ನು ಒಂದು ಅಭಿಯಾನವಾಗಿ ನಡೆಸುವಂತೆ ಮನವಿ ಮಾಡಿದರು.

ಕಾಂಗ್ರೆಸ್‌ನವರು ಆಯೋಜಿಸಿದ್ದ ‘ಸಂದೇಶ ಯಾತ್ರೆ’ಯು ದೆಹಲಿಯಲ್ಲಿರುವ ಕಾಂಗ್ರೆಸ್‌ ಮುಖ್ಯ ಕಚೇರಿಯಿಂದ ಆರಂಭವಾಗಿ 3.5 ಕಿ.ಮೀ. ಕ್ರಮಿಸಿ ದೀನದಯಾಳ ಉಪಾಧ್ಯಾಯ ಮಾರ್ಗದಲ್ಲಿರುವ ರಾಜೀವ ಭವನದಲ್ಲಿ ಕೊನೆಗೊಂಡಿತು.

ಗಾಂಧೀಜಿಯ ಸಾಬರಮತಿ ಆಶ್ರಮ ಮತ್ತು ಚರಕ ಗಳನ್ನು ಒಳಗೊಂಡ ಸ್ತಬ್ಧಚಿತ್ರವೂ ಈ ಪಾದಯಾತ್ರೆಯಲ್ಲಿತ್ತು.

ಗಾಂಧಿ ಆತ್ಮ ನೊಂದಿರಬಹುದು: ಸೋನಿಯಾ

‘ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಂಡು ಗಾಂಧೀಜಿಯ ಆತ್ಮ ನೋವು ಅನುಭವಿಸುತ್ತಿರಬಹುದು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹೇಳಿದರು.

ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವೇ ಶ್ರೇಷ್ಠರು ಎಂದು ಭಾವಿಸುವವರು ಮತ್ತು ಸುಳ್ಳಿನ ರಾಜ ಕಾರಣ ಮಾಡುವವರಿಗೆ ಮಹಾತ್ಮ ಗಾಂಧಿ ಮಾಡಿರುವ ತ್ಯಾಗ ಮತ್ತು ಅವರ ಚಿಂತನೆಗಳು ಅರ್ಥವಾಗಲಾರವು’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಟೀಕಿಸಿದರು.

‘ತಮ್ಮನ್ನು ತಾವು ಶ್ರೇಷ್ಠರು ಎಂದು ಪರಿಗಣಿಸುವವರಿಗೆ ಗಾಂಧೀಜಿಯ ತ್ಯಾಗಗಳು ಅರ್ಥವಾಗಲು ಹೇಗೆ ಸಾಧ್ಯ? ಸುಳ್ಳಿನ ರಾಜಕಾರಣ ಮಾಡುವವರಿಗೆ ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ತತ್ವ ಅರ್ಥವಾಗಲಾರದು. ಬೇರೆಯವರು ಏನೇ ಹೇಳಿಕೊಳ್ಳಬಹುದು, ಗಾಂಧೀಜಿ ಹಾಕಿಕೊಟ್ಟ ಹಾದಿಯಲ್ಲಿ ನಡೆದ ಪಕ್ಷ ಕಾಂಗ್ರೆಸ್‌ ಮಾತ್ರ. ಗಾಂಧಿ ಮತ್ತು ಭಾರತ ಸಮಾನಾರ್ಥಕ ಪದಗಳು. ಆದರೆ ಕೆಲವರು ಆರ್‌ಎಸ್‌ಎಸ್‌ ಅನ್ನು ಭಾರತಕ್ಕೆ ಸಮಾನಾರ್ಥಕವಾಗಿಸಲು ಬಯಸುತ್ತಾರೆ’ ಎಂದರು.

ಟ್ರಂಪ್ ವಿರುದ್ಧ ಆಕ್ರೋಶ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಷ್ಟ್ರಪಿತ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮೋದಿಯನ್ನು ಗಾಂಧಿಗೆ ಹೋಲಿಸಿದ ಟ್ರಂಪ್‌ಗೆ ನಾಚಿಕೆ ಆಗಬೇಕು. ಮೋದಿ ದೇಶ ಭಕ್ತರಾಗಿದ್ದರೆ ಅಲ್ಲೇ ಪ್ರತಿಭಟನೆ ವ್ಯಕ್ತಪಡಿಸಬೇಕಿತ್ತು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡದಿರುವುದನ್ನು ನೋಡಿದರೆ ಅವರ ಮನಸ್ಥಿತಿ ಎಂತಹುದು ಎಂಬುದು ಅರ್ಥವಾಗುತ್ತದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

‘ಇದು ಟ್ರಂಪ್‌ಗೆ ಇರುವ ಅಜ್ಞಾನವನ್ನು ತೋರಿಸುತ್ತದೆ. ಗೊತ್ತಿಲ್ಲದಿದ್ದರೆ ಒಬಾಮ ಅವರಿಂದ ಕೇಳಿ ತಿಳಿದುಕೊಳ್ಳಬೇಕಿತ್ತು’ ಎಂದು ಶಾಸಕ ಜಿ. ಪರಮೇಶ್ವರ ಹೇಳಿದರು.

**

ಮಾನವೀಯತೆಗೆ ಶಾಶ್ವತ ಕೊಡುಗೆ ನೀಡಿದ ಗಾಂಧಿಗೆ ಇಡೀ ರಾಷ್ಟ್ರ ನಮಿಸುತ್ತಿದೆ. ಅವರ ಕನಸುಗಳನ್ನು ಸಾಕಾರ ಗೊಳಿಸಲು ನಾವು ಪಣ ತೊಡುತ್ತೇವೆ
– ನರೇಂದ್ರ ಮೋದಿ, ಪ್ರಧಾನಿ

**

ಎಲ್ಲಾ ಜೀವಿಗಳನ್ನು ಪ್ರೀತಿಸುವ ಮೂಲಕ ಮಾತ್ರ ಅಹಿಂಸೆ ದಬ್ಬಾಳಿಕೆ, ಧರ್ಮಾಂಧತೆ ಮತ್ತು ದ್ವೇಷವನ್ನು ಸೋಲಿಸಲು ಸಾಧ್ಯ ಎಂಬುದನ್ನು ಗಾಂಧಿ ತೋರಿಸಿದ್ದರು
–ರಾಹುಲ್‌ ಗಾಂಧಿ,ಕಾಂಗ್ರೆಸ್‌ ಮುಖಂಡ

**

ಗಾಂಧೀಜಿಯ ಬಗ್ಗೆ ಮೋದಿಗೆ ಗೌರವ ಇರುವುದು ನಿಜವಾಗಿದ್ದರೆ, ತಮ್ಮನ್ನು ಟ್ರಂಪ್‌ ‘ಭಾರತದ ರಾಷ್ಟ್ರಪಿತ’ ಎಂದು ಕರೆದಾಗ ವಿರೋಧಿಸಲಿಲ್ಲವೇಕೆ?
– ಅಶೋಕ್‌ ಗೆಹ್ಲೋಟ್‌, ರಾಜಸ್ಥಾನದ ಮುಖ್ಯಮಂತ್ರಿ

**

ಹಿಂಸೆಗೆ ಪ್ರಚೋದನೆ, ರಕ್ತಪಾತ, ದ್ವೇಷ ಬಿತ್ತುವವರು ದೇಶ ಮುನ್ನಡೆಸಲು ಅರ್ಹರಲ್ಲ. ಸಲಹೆ ನೀಡಲೂ ಅರ್ಹತೆ ಇರಬೇಕು</p>
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT