ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆ ಅಸಾಧ್ಯವಲ್ಲ: ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

Last Updated 15 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವನ್ನು 2024ರ ವೇಳೆಗೆ ₹350 ಲಕ್ಷ ಕೋಟಿ ಅರ್ಥವ್ಯವಸ್ಥೆಯಾಗಿಸಬೇಕೆಂಬ ಗುರಿಯನ್ನು ಸಾಧಿಸುವುದು ಕಷ್ಟವಾದರೂ, ಅಸಾಧ್ಯವಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜ್ಯಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ರಫ್ತು ವಹಿವಾಟನ್ನು ಹೆಚ್ಚಿಸಲು ಗಮನ ಹರಿಸಬೇಕು. ಜಿಲ್ಲಾ ಮಟ್ಟದಿಂದಲೇ ಒಟ್ಟಾರೆ ಆಂತರಿಕ ಉತ್ಪನ್ನವನ್ನು (ಜಿಡಿಪಿ) ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

ದೇಶವು ಬರದ ಸ್ಥಿತಿಯನ್ನು ಎದುರಿಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ‘ಕಡಿಮೆ ನೀರಿನಲ್ಲಿ ಹೆಚ್ಚಿನ ಫಸಲು ಪಡೆಯುವ, ಪರಿಣಾಮ
ಕಾರಿ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಬರವನ್ನು ಸಮರ್ಥವಾಗಿ ನಿರ್ವಹಿಸಬೇಕು. ನೀರಿಗೆ ಸಂಬಂಧಿಸಿದಂತೆ ಸಮಗ್ರವಾದ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ರಚಿಸಲಾಗಿರುವ ‘ಜಲ ಶಕ್ತಿ’ ಸಚಿವಾಲಯವು ನೆರವು ಒದಗಿಸಲಿದೆ. ರಾಜ್ಯಗಳು ಇದ‌ಕ್ಕೆ ಕೈಜೋಡಿಸಬೇಕು ಎಂದು ಮೋದಿ ಮನವಿ ಮಾಡಿದರು.

ಮೂವರು ಮುಖ್ಯಮಂತ್ರಿಗಳು ಗೈರು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.

ನೀತಿ ಆಯೋಗವನ್ನು ಹಿಂದಿನಿಂದಲೇ ವಿರೋಧಿಸುತ್ತ ಬಂದಿರುವ ಮಮತಾ ಅವರು, ‘ಈ ಸಭೆಯು ಅರ್ಥಹೀನವಾಗಿರುವುದರಿಂದ ಸಭೆಗೆ ಹಾಜರಾಗುವುದಿಲ್ಲ’ ಎಂದು ಹಿಂದೆಯೇ ಪ್ರಧಾನಿಗೆ ಪತ್ರ ಬರೆದಿದ್ದರು. ಅನಾರೋಗ್ಯದ ಕಾರಣದಿಂದ ಅಮರಿಂದರ್‌ ಸಿಂಗ್‌ ಹಾಜರಾಗಲಿಲ್ಲ. ಆದರೆ ಅವರ ಬದಲು ರಾಜ್ಯದ ಹಣಕಾಸು ಸಚಿವ ಮನ್‌ಪ್ರೀತ್‌ ಬಾದಲ್‌ ಸಭೆಗೆ ಹಾಜರಾಗಿದ್ದರು. ಕೆಸಿಆರ್‌ ಅವರು ₹ 80ಸಾವಿರ ಕೋಟಿ ಮೊತ್ತದ ಕಾಲೇಶ್ವರಂ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಸಿದ್ಧತೆಯಲ್ಲಿರುವುದರಿಂದ ಸಭೆಗೆ ಬಂದಿರಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT