ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡನ ಪರಸಂಗ ತೋರಿಸಿಕೊಟ್ಟ ರಸ್ತೆ ಸುರಕ್ಷತಾ ಕ್ಯಾಮೆರಾ!

Published 10 ಮೇ 2023, 11:14 IST
Last Updated 10 ಮೇ 2023, 11:14 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೇರಳದಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕ್ಯಾಮೆರಾಗಳು ರಾಜ್ಯ ಸರ್ಕಾರಕ್ಕೆ ಮಾತ್ರ ತಲೆನೋವಾಗಿರದೆ, ದಂಪತಿಯ ನಡುವೆ ಜಗಳಕ್ಕೂ ಕಾರಣವಾಗಿದೆ.

ಇಡುಕ್ಕಿಯ 32 ವರ್ಷದ ನಿವಾಸಿಯೊಬ್ಬ ಏ.25ರಂದು ಹೆಲ್ಮೆಟ್‌ ಧರಿಸದೆ ತನ್ನ ಮಹಿಳಾ ಸ್ನೇಹಿತೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದಿದ್ದು, ಅದರ ಚಿತ್ರ ಪತ್ನಿ ಕೈ ಸೇರಿದ್ದರಿಂದ ಪತಿ ಈಗ ಜೈಲಿನ ಕಂಬಿ ಎಣಿಸುವಂತಾಗಿದೆ.

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಕಾರಣ ವ್ಯಕ್ತಿಯ ಫೋಟೋವನ್ನು ಕ್ಯಾಮೆರಾಗಳು ಸೆರೆಹಿಡಿದಿದ್ದು, ಅದನ್ನು ಸಾರಿಗೆ ಇಲಾಖೆ ದ್ವಿಚಕ್ರ ವಾಹನದ ಮಾಲಕಿಯಾದ ಮಹಿಳೆಗೆ ಕಳುಹಿಸಿತ್ತು. ಇದನ್ನು ಗಮನಿಸಿದ ಪತ್ನಿ, ಆ ಮಹಿಳೆ ಯಾರೆಂದು ಪತಿಯನ್ನು ವಿಚಾರಿಸಿದ್ದರು. ‘ಆಕೆ ಕೇವಲ ನನ್ನ ಸ್ನೇಹಿತೆ, ಆಕೆಗೂ, ನನಗೂ ಯಾವುದೇ ಸಂಬಂಧ ಇಲ್ಲ. ಆಕೆಗೆ ಕೇವಲ ಡ್ರಾಪ್ ನೀಡಲಾಗಿದೆ’ ಎಂದು ಪತಿ ಹೇಳಿದ್ದರು. ಆದರೆ ಇದನ್ನು ನಂಬದ ಪತ್ನಿ, ಪತಿ ಜೊತೆ ಜಗಳವಾಡಿದರು. ಮೇ 5ರಂದು ಕರಮನ ಪೊಲೀಸ್ ಠಾಣೆಗೆ ತೆರಳಿ, ಪತಿಯು ತನ್ನ ಹಾಗೂ ತನ್ನ ಮೂರು ವರ್ಷದ ಮಗುವಿನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ದೂರು ಆಧರಿಸಿದ ಪೊಲೀಸರು, ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನನ್ನು ಈಗ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸ್ತೆ ಸುರಕ್ಷತಾ ಯೋಜನೆಯ 'ಸೇಫ್ ಕೇರಳ' ಭಾಗವಾಗಿ ರಾಜ್ಯದ ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ವಿಚಾರ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಕ್ಯಾಮೆರಾಗಳ ಅಳವಡಿಕೆಗೆ ಸಂಬಂಧಿಸಿದ ಒಪ್ಪಂದಗಳ ಕುರಿತು ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಭ್ರಷ್ಟಾಚಾರ ಆರೋಪವನ್ನೂ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT