ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್‌ ಜೈಲಿನಲ್ಲಿ ಒಂದು ವರ್ಷ ಕಳೆದ ಮನೀಶ್ ಸಿಸೋಡಿಯಾ: ದಿನಚರಿ ಹೀಗಿದೆ..

Published 26 ಫೆಬ್ರುವರಿ 2024, 13:09 IST
Last Updated 26 ಫೆಬ್ರುವರಿ 2024, 13:09 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಇಂದಿಗೆ (ಸೋಮವಾರ) ತಿಹಾರ್‌ ಜೈಲಿನಲ್ಲಿ ಒಂದು ವರ್ಷ ಕಳೆದಿದ್ದಾರೆ. ಬ್ಯಾಡ್ಮಿಂಟನ್‌ ಆಡುತ್ತಾ, ಭಗವದ್ಗೀತೆ ಸೇರಿದಂತೆ ಪುಸ್ತಕಗಳನ್ನು ಓದುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರ ಫೆಬ್ರುವರಿ 26 ರಂದು ದೆಹಲಿ ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಂಧಿಸಿತು. ಬಳಿಕ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಈ ಪ್ರಕರಣದಲ್ಲಿ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿತ್ತು.

ಪ್ರಸ್ತುತ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನ ಸೆಲ್‌ ‌ಸಂಖ್ಯೆ 1ರಲ್ಲಿ ಇರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಿಸೋಡಿಯಾ ಅವರು ತಮ್ಮ ಹೆಚ್ಚಿನ ಸಮಯವನ್ನು ಭಗವದ್ಗೀತೆ ಸೇರಿದಂತೆ ಲೈಬ್ರರಿಯಿಂದ ನೀಡಲಾದ ಪುಸ್ತಕಗಳನ್ನು ಓದುವುದರಲ್ಲಿಯೇ ಕಳೆಯುತ್ತಾರೆ. ಸಂಜೆ ಬ್ಯಾಡ್ಮಿಂಟನ್ ಕೂಡ ಆಡುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಸೋಡಿಯಾ ಬೆಳಿಗ್ಗೆ ಚಹಾ ಸೇವಿಸುವ ಮೊದಲು ಧ್ಯಾನ ಮಾಡುತ್ತಾರೆ. ಉಳಿದಂತೆ ಯಾವುದೇ ನಿರ್ದಿಷ್ಟ ವಿಷಯಕ್ಕೆ ಬೇಡಿಕೆ ಇಟ್ಟಿಲ್ಲ. ಇತರ ಕೈದಿಗಳಂತೆ ಜೈಲಿನಲ್ಲಿ ಇರಿಸಲಾಗಿದೆ. ಅವರ ಸೌಮ್ಯ ನಡವಳಿಕೆಯಿಂದಾಗಿ ತಿಹಾರ್‌ನ ಇತರ ಜೈಲುಗಳಿಗೆ ಸ್ಥಳಾಂತರಿಸಲಾಗಿಲ್ಲ. ಚಹಾ, ಭೋಜನ ಮತ್ತು ದೂರದರ್ಶನ ನೋಡುವ ಸಮಯ ಇತರ ಕೈದಿಗಳಂತೆ ಅವರಿಗೂ ಒಂದೇ ಆಗಿರುತ್ತದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಅಬಕಾರಿ ಪ್ರಕರಣದಲ್ಲಿ ಬಂಧಿಸಲ್ಪಟ್ಟು ತಿಹಾರ್ ಜೈಲಿನಲ್ಲಿರುವ ಮೂವರು ಎಎಪಿ ನಾಯಕರಲ್ಲಿ ಸಿಸೋಡಿಯಾ ಕೂಡ ಒಬ್ಬರು . ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಬಂಧಿತ ಇತರ ಇಬ್ಬರು ನಾಯಕರು.

2023ರ ಮಾರ್ಚ್ ನಲ್ಲಿ , ನ್ಯಾಯಾಲಯವು ಭಗವದ್ಗೀತೆ , ಪೆನ್ನು ಮತ್ತು ಡೈರಿಯನ್ನು ಕೊಂಡೊಯ್ಯಲು ಅವಕಾಶ ನೀಡಿತ್ತು. ಇದು ಎಲ್ಲಾ ಕೈದಿಗಳಿಗೆ ಒದಗಿಸುವ ಸೌಲಭ್ಯ. ಅಲ್ಲದೇ ಕೈದಿಗಳಿಗೆ ಕರೆ ಮಾಡುವ ಸೌಲಭ್ಯವಿದೆ. ಒಬ್ಬ ಕೈದಿ ತನ್ನ ಕುಟುಂಬದೊಂದಿಗೆ ದಿನಕ್ಕೆ ಒಮ್ಮೆ 5 ನಿಮಿಷಗಳ ಕಾಲ ಮಾತನಾಡಬಹುದು. ಸಿಸೋಡಿಯಾ ಕೂಡ ತನ್ನ ಕುಟುಂಬಸ್ಥರೊಂದಿಗೆ ಮಾತನಾಡುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಹಲವು ಬಾರಿ ತಿರಸ್ಕರಿಸಿದೆ. ಆದರೆ, ಅನಾರೋಗ್ಯ ಪೀಡಿತ ಪತ್ನಿಯನ್ನು ಎರಡು ಬಾರಿ ಭೇಟಿಯಾಗಲು ಅನುಮತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT