ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌ | ರಾಜ್‌ಕೋಟ್‌ನ ಗೇಮ್‌ ಝೋನ್‌ನಲ್ಲಿ ಅಗ್ನಿ ದುರಂತ: 27 ಸಾವು

Published 25 ಮೇ 2024, 15:22 IST
Last Updated 25 ಮೇ 2024, 15:22 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಇಲ್ಲಿನ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಝೋನ್‌’ನಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿದಂತೆ 22 ಮಂದಿ ಸಾವಿಗೀಡಾಗಿದ್ದಾರೆ.

‘ಆಟದ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ಫೈಬರ್‌ ಗೊಮ್ಮಟದಲ್ಲಿ ಸಂಜೆ ಸುಮಾರು 4.30 ಗಂಟೆಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಕಾರಣಕ್ಕೆ ಕಟ್ಟಡ ಕುಸಿಯಿತು. ಈ ವೇಳೆ ಮಕ್ಕಳು ಸೇರಿ ಹಲವರು ಆ ಸ್ಥಳದಲ್ಲಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಬೇಸಿಗೆ ರಜೆ ಕಾರಣ ಗೇಮ್‌ ಝೋನ್‌ನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ’ ಎಂದು ತಿಳಿಸಿದ್ದಾರೆ. 

’ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಕೂಡಲೇ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ನಗರಾಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು  ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ದುರ್ಘಟನೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ನಗರದಲ್ಲಿರುವ ಎಲ್ಲಾ ಗೇಮ್‌ ಝೋನ್‌ಗಳಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, 20 ಮೃತದೇಹಳಗನ್ನು ಹೊರತೆಗೆಯಲಾಗಿದೆ. ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಬೆಂಕಿ ನಿಯಂತ್ರಣದಲ್ಲಿದೆ ಎಂದು ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ ಎಎನ್‌ಐಗೆ ತಿಳಿಸಿದ್ದಾರೆ.

‘ಬೆಂಕಿ ಅನಾಹುತ ಸಂಭವಿಸಿರುವುದರ ಬಗ್ಗೆ ಸಂಜೆ 4.30ಕ್ಕೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂತು. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಆ್ಯಂಬುಲೆನ್ಸ್‌ಗಳು ದೌಡಾಯಿಸಿದವು. ಬೆಂಕಿಯಿಂದಾಗಿ ಕಟ್ಟಡ ಕುಸಿದಿತ್ತು, ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ’ ಎಂದು ರಾಜ್‌ಕೋಟ್ ಜಿಲ್ಲಾಧಿಕಾರಿ ಪ್ರಭಾವ್ ಜೋಶಿ ತಿಳಿಸಿದ್ದಾರೆ.

‘ದುರಂತಕ್ಕೆ ಕಾರಣ ಏನೆನ್ನುವುದನ್ನು ಪತ್ತೆ ಮಾಡಲಾಗುವುದು. ನಗರದಲ್ಲಿರುವ ಎಲ್ಲಾ ಗೇಮ್‌ ಝೋನ್‌ಗಳನ್ನು ಬಂದ್‌ ಮಾಡಲು ಆದೇಶಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಭಾರ್ಗವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT