ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿ ಪ್ರದೇಶಗಳಲ್ಲಿ ಜೇನುಸಾಕಣೆ: ಬಿಎಸ್‌ಎಫ್ ಮಾದರಿ ಅಳವಡಿಕೆಗೆ ಸೂಚನೆ

Published 12 ಮೇ 2024, 15:45 IST
Last Updated 12 ಮೇ 2024, 15:45 IST
ಅಕ್ಷರ ಗಾತ್ರ

ನವದೆಹಲಿ: ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪಶ್ಚಿಮ ಬಂಗಾಳ ಘಟಕವು ಅಳವಡಿಸಿಕೊಂಡಿರುವ ‘ಗಡಿ ಬೇಲಿಯಲ್ಲಿ ಜೇನುಗೂಡು’ ಮಾದರಿಯನ್ನು ಎಲ್ಲ ಕೇಂದ್ರೀಯ ಅರೆಸೇನಾ ಪಡೆಗಳು ಹಾಗೂ ಇತರ ಪಡೆಗಳು ಜಾರಿಗೆ ತರಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.

ಈ ಮಾದರಿಯು ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ, ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಳೀಯರಲ್ಲಿ ಸದಭಿಪ್ರಾಯ ಮೂಡಿಸಲು ನೆರವಾಗುತ್ತಿದೆ.

ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಏಪ್ರಿಲ್‌ನಲ್ಲಿ ಕರೆದಿದ್ದ ‘ವೈಜ್ಞಾನಿಕ ಜೇನುಸಾಕಣೆ ಮತ್ತು ಜೇನುತುಪ್ಪ ಕಾರ್ಯಯೋಜನೆ’ ಕುರಿತ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಬಿಎಸ್‌ಎಫ್‌ನ 32ನೆಯ ಬೆಟಾಲಿಯನ್‌ ರೂಪಿಸಿ, ಜಾರಿಗೆ ತಂದಿರುವ ಈ ಮಾದರಿಯನ್ನು ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಭಾರತ–ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಅಳವಡಿಸಲಾಗಿದೆ. ಇದನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್‌ಗಳು) ಅಳವಡಿಸಿಕೊಳ್ಳಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಎಸ್‌ಎಫ್‌ ಅನುಷ್ಠಾನಕ್ಕೆ ತಂದಿರುವ ಈ ಮಾದರಿಯು ದೂರದ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ, ಸ್ಥಳೀಯರ ಸ್ನೇಹ ಸಂಪಾದಿಸುವ ಮತ್ತು ಅವರಲ್ಲಿ ಸದಭಿಪ್ರಾಯ ಮೂಡಿಸುವ ಉದ್ದೇಶ ಹೊಂದಿದೆ. ಸ್ಥಳೀಯರು ಇಂತಹ ಪ್ರದೇಶಗಳಲ್ಲಿ ಭದ್ರತೆಯ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತಾರೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮಾದರಿಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿಗೆ ತರಲಾಯಿತು. ಬಿಎಸ್‌ಎಫ್‌ ಯೋಧರು ನಾದಿಯಾ ಜಿಲ್ಲೆಯಲ್ಲಿ ಅಂದಾಜು 200 ಜೇನುಪೆಟ್ಟಿಗೆಗಳನ್ನು ಇರಿಸಿದ್ದಾರೆ. ಈ ಮೂಲಕ ಅವರು ಸ್ಥಳೀಯರನ್ನು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಜೀವನೋಪಾಯಕ್ಕೆ ಹೆಚ್ಚಿನ ಅವಕಾಶಗಳು ಇಲ್ಲದಿರುವ ಕಾರಣದಿಂದಾಗಿ ಸ್ಥಳೀಯರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕಂಡುಬಂದ ನಂತರ ಈ ಯೋಜನೆಯನ್ನು ಆರಂಭಿಸಲಾಯಿತು ಎಂದು ಕಮಾಂಡೆಂಟ್ ಸುಜೀತ್ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದರು.

‘ಬೇಲಿಗಳ ಮೇಲೆ ಜೇನುಪೆಟ್ಟಿಗೆ’ ಯೋಜನೆಯ ಅಡಿಯಲ್ಲಿ ಸ್ಥಳೀಯರನ್ನು ಜೇನುತುಪ್ಪ ಉತ್ಪಾದನೆಯಲ್ಲಿ, ಜೇನುಹುಳುಗಳಿಗಾಗಿ ಕೆಲವು ಗಿಡಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಲಾಗುತ್ತದೆ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT