ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಗ್ನಿಪಥ ಯೋಜನೆ|ರಾಷ್ಟ್ರೀಯ ಭದ್ರತೆ ಜತೆ ಮೋದಿ ಸರ್ಕಾರ ಆಟವಾಡುತ್ತಿದೆ: ಕಾಂಗ್ರೆಸ್

Published 27 ಮೇ 2024, 13:45 IST
Last Updated 27 ಮೇ 2024, 13:45 IST
ಅಕ್ಷರ ಗಾತ್ರ

ನವದೆಹಲಿ: ಅಗ್ನಿಪಥ ಯೋಜನೆ ಜಾರಿಗೆ ತರುವ ಮೂಲಕ ರಾಷ್ಟ್ರೀಯ ಭದ್ರತೆ ಮತ್ತು ದೇಶದ ಯುವಕರ ಭವಿಷ್ಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಟವಾಡುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಆರೋಪಿಸಿದ್ದಾರೆ.

ಅಗ್ನಿಪಥ ಯೋಜನೆಯು ನಿರ್ಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಕೊಡುಗೆಯಾಗಿದೆ. ಈ ಯೋಜನೆ ಜಾರಿಗೆ ಬರುವ ಮೊದಲು ಸುಮಾರು 75,000 ಯುವಕರು ವಾರ್ಷಿಕವಾಗಿ ಸಶಸ್ತ್ರ ಪಡೆಗಳಿಗೆ ನೇಮಕಗೊಳ್ಳುತ್ತಿದ್ದರು. ಆದರೆ, ಈಗ ಅದು ನಾಲ್ಕನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿರ್ಗಮಿತ ಪ್ರಧಾನಿ ಮೋದಿ ಅವರು ಯಾವುದೇ ಚರ್ಚೆಗಳನ್ನು ನಡೆಸದೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ಚೀನಾ ಎದುರು ನಮ್ಮ ಸೇನಾ ಸಾಮರ್ಥ್ಯದ ರಾಜಿಯಾಗಿದೆ. ಸೇನೆ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಅಗ್ನಿಪಥ ಯೋಜನೆಯಡಿ ಯುವಕರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಬಳಿಕ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಹೋರಾಡಲು ಕಳುಹಿಸಲಾಗುತ್ತದೆ. ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರು ಸಹ ಈ ಯೋಜನೆಯನ್ನು ವಿರೋಧಿಸಿದ್ದರು. ಈ ಕುರಿತು ನಿವೃತ್ತ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ರಮೇಶ್‌ ಹೇಳಿದ್ದಾರೆ

ಅಗ್ನಿಪಥ ಯೋಜನೆಯನ್ನು ಏಕೆ ಜಾರಿಗೊಳಿಸಲಾಯಿತು ಮತ್ತು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಏಕೆ ಆಟವಾಡಲಾಯಿತು ಎಂಬುದಕ್ಕೆ ಜೂನ್‌ 4ರ ನಂತರ ನಿರ್ಗಮಿತ ಪ್ರಧಾನಿ ಮೋದಿ ಅವರು ಉತ್ತರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

2022ರ ಜೂನ್‌ನಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಅವಕಾಶ ಕಲ್ಪಿಸುವ ‘ಅಗ್ನಿಪಥ’ ಎಂಬ ಹೊಸ ನೇಮಕಾತಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಇದರನ್ವಯ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT