ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರ: ಸ್ಫೋಟಕ ತಯಾರಿಕಾ ಘಟಕ ದುರಂತ; ಮೃತರ ಗುರುತು ಪತ್ತೆಗೆ DNA ಪರೀಕ್ಷೆ

ಸ್ಫೋಟಕಗಳ ಉತ್ಪಾದನಾ ಘಟಕದಲ್ಲಿ ಸ್ಫೋಟ ಪ್ರಕರಣ *
Published 18 ಡಿಸೆಂಬರ್ 2023, 14:42 IST
Last Updated 18 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕಗಳ ಉತ್ಪಾದನಾ ಘಟಕದಲ್ಲಿ ಭಾನುವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಭಾನುವಾರ ಸಂಭವಿಸಿದ್ದ ಸ್ಫೋಟದಲ್ಲಿ 9 ಜನರು ಮೃತಪಟ್ಟಿದ್ದರು. ತನಿಖಾ ತಂಡಗಳು ಸ್ಥಳದಿಂದ ದೇಹದ ವಿವಿಧ ಭಾಗಗಳನ್ನು ಸಂಗ್ರಹಿಸಿವೆ. ಇವುಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ನಾಗ್ಪುರದ ಚಾಕ್‌ಡೋಹ್‌ನಲ್ಲಿರುವ ಸೋಲಾರ್‌ ಇಂಡಸ್ಟ್ರೀಸ್‌ ಇಂಡಿಯಾ ಘಟಕದಲ್ಲಿ ಈ ಅವಘಡ ಸಂಭವಿಸಿತ್ತು. ಸ್ಥಳದಲ್ಲಿ ಸಂಗ್ರಹಿಸಿದ ದೇಹದ ವಿವಿಧ ಭಾಗಗಳನ್ನು ಭಿನ್ನ ಪ್ಯಾಕೆಟ್‌ಗಳಲ್ಲಿ ಇಡಲಾಗಿದೆ. ಮಾದರಿ ಆಧರಿಸಿ ಡಿಎನ್‌ಎ ಪರೀಕ್ಷೆ ಬಳಿಕ ಗುರುತು ಪತ್ತೆ ಮಾಡಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಪಘಡದ ತೀವ್ರತೆಗೆ ನತದೃಷ್ಟರ ದೇಹಗಳು ಚೂರುಗಳಾಗಿವೆ. ಹಲವು ದೂರಕ್ಕೆ ಎಸೆಯಲ್ಪಟ್ಟಿವೆ. ಕಟ್ಟಡ ಕುಸಿದಿದೆ. ಅವಘಡದ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ  ಎಂದು ಸ್ಥಳೀಯ ಕೊಂದಳಿ ಠಾಣೆಯ ಅಧಿಕಾರಿ ತಿಳಿಸಿದರು. 

ತನಿಖಾ ತಂಡಗಳು ಸ್ಥಳದಿಂದ ಇದುವರೆಗೂ 50 ಅಂಗಗಳನ್ನು ವಶಕ್ಕೆ ಪಡೆದಿವೆ. ಸಾವಿಗೆ ಕಾರಣವಾದ ನಿರ್ಲಕ್ಷ್ಯ (ಐಪಿಸಿ 304ಎ), ನಿರ್ಲಕ್ಷ್ಯ (286) ಕುರಿತು ಪ್ರಕರಣ ದಾಖಲಿಸಲಾಗಿದೆ. ತನಿಖೆ ಹಂತದಲ್ಲಿಯೇ ಆರೋಪಿಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ. 

ತನಿಖೆಗೆ ಆಗ್ರಹ

ಸ್ಥಳದಲ್ಲಿ ಸುರಕ್ಷತೆಗೆ ಒತ್ತು ನೀಡಿರಲಿಲ್ಲ. ಸುರಕ್ಷತಾ ವೈಫಲ್ಯವೇ ಅವಘಡಕ್ಕೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ಶಾಸಕರು ಆರೋಪಿಸಿದ್ದಾರೆ. 

ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷದ ನಾಯಕ ಅಂಬಾದಾಸ್‌ ದಾನ್ವೆ (ಶಿವಸೇನೆ ಉದ್ಧವ್‌ ಬಣ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾತ್ರಿ ಪಾಳಿ ನಂತರ ಹಗಲು ಪಾಳಿ ಕೆಲಸಕ್ಕೂ ಬರುವಂತೆ ಕಾರ್ಮಿಕರಿಗೆ ಒತ್ತಡ ಹೇರಲಾಗುತ್ತಿತ್ತು. ಸುರಕ್ಷತಾ ಕ್ರಮಗಳಿರಲಿಲ್ಲ ಎಂದು ಟೀಕಿಸಿದರು.

ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್‌, ಅಜಿತ್‌ ಪವಾರ್‌ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಅವಘಡ ಕುರಿತು ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT