ಹೊಸ ಕಾರ್ಮಿಕ ಸಂಹಿತೆಗಳ ಅಗತ್ಯವೇನು?
ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ದೇಶದಲ್ಲಿ ಉದ್ಯಮಗಳು ಆರಂಭವಾಗುತ್ತಿದ್ದ ಹಂತದಲ್ಲಿ ರೂಪಿಸಿದಂಥವು. ಜಗತ್ತಿನ ಮುಂದುವರಿದ ಆರ್ಥಿಕತೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದರೂ ಭಾರತದಲ್ಲಿ ಹಳೆಯ ನಿಯಮಗಳೇ ಚಾಲ್ತಿಯಲ್ಲಿದ್ದವು. ವಸಾಹತುಶಾಹಿಯ ನೆರಳಿನಿಂದ ಹೊರಬಂದು, ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ, ಉದ್ಯಮಿ ಮತ್ತು ಕಾರ್ಮಿಕ ಇಬ್ಬರ ಹಿತವನ್ನೂ ಕಾಯುವಂತೆ ಹೊಸ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿತ್ತು. ಈ ದಿಸೆಯಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಸದ್ಯದ ಮತ್ತು ಭವಿಷ್ಯದ ತಾಂತ್ರಿಕ ಹಾಗೂ ಆರ್ಥಿಕ ಬೆಳವಣಿಗೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಪಡೆಯನ್ನು ಸಿದ್ಧಗೊಳಿಸಲು ಈ ನಾಲ್ಕು ಸಂಹಿತೆಗಳು ನೆರವಾಗಲಿವೆ ಎಂದು ಕೇಂದ್ರವು ಹೇಳಿದೆ.