ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: ಮುಖ್ಯ ಆರೋಪಿಯನ್ನು ಬಂಧಿಸಿದ NIA

Published 10 ಜನವರಿ 2024, 12:48 IST
Last Updated 10 ಜನವರಿ 2024, 12:48 IST
ಅಕ್ಷರ ಗಾತ್ರ

ಕಣ್ಣೂರು: 2010ರಲ್ಲಿ ನಡೆದಿದ್ದ ಕೇರಳ ಪ್ರಾಧ್ಯಾಪಕರೊಬ್ಬರ ಮುಂಗೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸದಿಂತೆ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆ (NIA) ಬುಧವಾರ ಬಂಧಿಸಿದೆ.

ಬಂಧಿತ ಆರೋಪಿಯನ್ನು ಸಾವಾದ್ ಎಂದು ಗುರುತಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್‌ ಕಾಲೇಜಿನ ವಾಣಿಜ್ಯ ವಿಷಯ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ ಅವರ ಕೈಯನ್ನು 2010ರ ಜುಲೈ 4ರಂದು ಕತ್ತರಿಸಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.

ಬಿ.ಕಾಂ. ಸೆಮಿಸ್ಟರ್‌ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ನಿಷೇಧಿತ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಬಲಿತರು ಕೃತ್ಯ ಎಸಗಿದ್ದರು. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ಕೈಗೆತ್ತಿಕೊಂಡಿದ್ದ ಎನ್‌ಐಎ, ಆರೋಪಿಗಳ ಬಂಧನಕ್ಕೆ ₹ 10 ಲಕ್ಷ ಬಹುಮಾನವನ್ನು ಘೋಷಿಸಿತ್ತು. ಪ್ರಮುಖ ಆರೋಪಿ ಸಾವಾದ್‌ನನ್ನು ಕೇರಳದ ಉತ್ತರ ಭಾಗದ ಮಟ್ಟನ್ನೂರ್‌ನಿಂದ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಬಂಧನ ಕುರಿತು ಪ್ರತಿಕ್ರಿಯಿಸಿರುವ ಜೋಸೆಫ್, ‘ಕೃತ್ಯದ ಹಿಂದಿನ ಪ್ರಮುಖ ವ್ಯಕ್ತಿಯ ಬಂಧನ ನನಗೇನೂ ಅನಿಸುತ್ತಿಲ್ಲ. ಏಕೆಂದರೆ ಇಡೀ ಯೋಜನೆಯ ಪ್ರಮುಖ ರೂವಾರಿ ಎಲ್ಲಿಯೋ ಅಡಗಿಕೊಂಡಿದ್ದಾರೆ. ತನಿಖಾ ಸಂಸ್ಥೆ ಅವರನ್ನು ತಲುಪಲು ಸಾಧ್ಯವಾಗಿಲ್ಲ. ಇದರ ಅರ್ಥ ನಮ್ಮ ಕಾನೂನು ಸುವ್ಯವಸ್ಥೆ ಆ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ’ ಎಂದಿದ್ದಾರೆ.

‘ನಾನು ಏನು ಕಳೆದುಕೊಂಡಿದ್ದೇನೋ ಅದು ಮರಳಿ ಸಿಗಲು ಸಾಧ್ಯವಿಲ್ಲ. ಸಂತ್ರಸ್ತನಾದ ನನಗೆ ಈ ವಿಷಯ ಯಾವುದೇ ನ್ಯಾಯವನ್ನು ಒದಗಿಸಿಲ್ಲ ಎಂಬುದನ್ನು ಪುನರುಚ್ಚರಿಸುತ್ತೇನೆ’ ಎಂದು ಜೋಸೆಫ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಮೇ 1ರಂದು 13 ಮಂದಿಯನ್ನು ಅಪರಾಧಿಗಳೆಂದು ಪರಿಗಣಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎನ್ನಲಾದ ಇತರ 18 ಮಂದಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶ ಪಿ. ಶಶಿಧರನ್‌ ಅವರು ಖುಲಾಸೆಗೊಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, 30 ಪ್ರಾಸಿಕ್ಯೂಷನ್‌ ಸಾಕ್ಷಿಗಳು, ನಾಲ್ವರು ಪರ ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಅಂತಿಮವಾಗಿ ನ್ಯಾಯಾಲಯ 13 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು.

ಬಿ.ಕಾಂ. ಸೆಮಿಸ್ಟರ್‌ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ನಂಬಿದ್ದ ಏಳು ಜನರಿದ್ದ ಗುಂಪೊಂದು ಜೋಸೆಫ್‌ ಅವರನ್ನು ವಾಹನದಿಂದ ಹೊರಗೆಳೆದು ಹಲ್ಲೆ ನಡೆಸಿ, ನಂತರ ಬಲಗೈಯನ್ನು ಕತ್ತರಿಸಿದ್ದರು. ಆದರೆ ಬಂಧಿತನ ಉದ್ದೇಶ ಪ್ರಾಧ್ಯಾಪಕರ ಕೊಲೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT