ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತದಲ್ಲಿ ಜನರ ಬದುಕಿನಲ್ಲಿ ಸಮೃದ್ಧಿ ಕಾಣುತ್ತಿಲ್ಲ ಏಕೆ?: ಪ್ರಿಯಾಂಕಾ

Published 26 ಮೇ 2024, 9:57 IST
Last Updated 26 ಮೇ 2024, 9:57 IST
ಅಕ್ಷರ ಗಾತ್ರ

ಫತೇಘರ್ ಸಾಹಿಬ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದ ಆರ್ಥಿಕತೆಯು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾಗಿದ್ದರೆ, ಜನರ ಬದುಕು ಏಕೆ ಸಮೃದ್ಧಿಯಿಂದ ಕೂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಫತೇಘರ್‌ ಸಾಹಿಬ್‌ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಮರ್‌ ಸಿಂಗ್‌ ಅವರ ಪರ ಮತಯಾಚಿಸಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಮತ್ತು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಸುಮಾರು 70 ಕೋಟಿ ಯುವಜನತೆಯು ನಿರುದ್ಯೋಗಿಗಳಾಗಿದ್ದಾರೆ ಮತ್ತು ಕಳೆದ 45 ವರ್ಷಗಳಲ್ಲಿ ನಿರುದ್ಯೋಗವು ಹೆಚ್ಚಿದೆ. ಮೋದಿ ಅವರ ಆಡಳಿತದಲ್ಲಿ ಸರ್ಕಾರಿ ವಲಯದಲ್ಲಿ ಸುಮಾರು 30 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಆರ್ಥಿಕತೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಎಂದು ಮೋದಿ ಅವರು ಸಮರ್ಥಿಸಿಕೊಳ್ಳುತ್ತಾರೆ. ಹಣದುಬ್ಬರವು ವಿಪರೀತ ಏರಿಕೆ ಆಗಿರುವುದು ಏಕೆ? ದೇಶವು ತ್ವರಿತಗತಿಯಲ್ಲಿ ಅಭಿವೃದ್ಧಿ ಆಗುತ್ತಿದ್ದರೆ, ಉಕ್ಕಿನ ಘಟಕಗಳು ಏಕೆ ಬಾಗಿಲು ಮುಚ್ಚುತ್ತಿವೆ? ಜಿಎಸ್‌ಟಿ ಹೇರಿಕೆಯಿಂದ ಉದ್ಯಮ ವಲಯಕ್ಕೆ ಪೆಟ್ಟು ಬಿದ್ದಿದ್ದು ಏಕೆ? ಮಧ್ಯಮ ವರ್ಗಕ್ಕೆ ಒಂದೂ ಯೋಜನೆ ಇಲ್ಲ ಏಕೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಪ್ರಗತಿಯನ್ನು ಟಿವಿಯಲ್ಲಿ ಮಾತ್ರ ನೋಡಲಾಗುತ್ತಿದೆಯೇ ಹೊರತು ಜನರ ಜೀವನದಲ್ಲಿ ಯಾವುದೇ ಪ್ರಗತಿ ಕಾಣಿಸುತ್ತಿಲ್ಲ. ಸಾರ್ವಜನಿಕರನ್ನು ಬಿಜೆಪಿ ಗೌರವಿಸುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಅವರು ಮಾತನಾಡುವುದಿಲ್ಲ. ಹಣದುಬ್ಬರವನ್ನು ತಗ್ಗಿಸಲು ಮತ್ತು ನಿರುದ್ಯೋಗವನ್ನು ಕಡಿಮೆಗೊಳಿಸಲು ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ ಎಂಬುವುದನ್ನು ಅವರು ಹೇಳುವುದಿಲ್ಲ. ಸಾರ್ವಜನಿಕರ ಬಗ್ಗೆ ಮಾತನಾಡುವುದು ಕಾಂಗ್ರೆಸ್‌ ಮಾತ್ರ ಎಂದು ಪ್ರಿಯಾಂಕಾ ಪ್ರತಿಪಾದಿಸಿದ್ದಾರೆ.

ಪಂಜಾಬ್‌ನಲ್ಲಿ ಜೂನ್ 1ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT