ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಕಾಲದಲ್ಲಿ ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಹಾನಿ: ಎಎಪಿ ಪತ್ರ

ಒಎನ್‌ಒಇ ವಿರೋಧಿಸಿ ಕೋವಿಂದ್ ನೇತೃತ್ವದ ಸಮಿತಿಗೆ ಎಎಪಿ ಪತ್ರ
Published 20 ಜನವರಿ 2024, 15:47 IST
Last Updated 20 ಜನವರಿ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು (ಒಎನ್‌ಒಇ) ಕಟುವಾಗಿ ವಿರೋಧಿಸಿರುವ ಎಎಪಿಯು, ಈ ಪ್ರಸ್ತಾವವು ಪ್ರಜಾಪ್ರಭುತ್ವಕ್ಕೆ ಹಾನಿ ಉಂಟುಮಾಡುತ್ತದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ನೇತೃತ್ವದ ಸಮಿತಿಗೆ ಹೇಳಿದೆ.

ಈ ಯೋಜನೆಯು ಮುಕ್ತ ಮತ್ತು ಪಾರದರ್ಶಕ ಚುನಾವಣೆ, ಒಕ್ಕೂಟ ವ್ಯವಸ್ಥೆ ಮತ್ತು ಸಂಸದೀಯ ವ್ಯವಸ್ಥೆಯನ್ನು ಹಾಳುಗೆಡವಲಿದೆ. ಸಂವಿಧಾನದ ಮೂಲರಚನೆಗೇ ಅಪಾಯ ಉಂಟುಮಾಡುತ್ತದೆ ಎಂದು ಕೂಡಾ ಪಕ್ಷವು ಹೇಳಿದೆ.

ಈ ಕುರಿತು ಎಎಪಿ ಪ್ರಧಾನ ಕಾರ್ಯದರ್ಶಿ ಪಂಕಜ್‌ ಗುಪ್ತಾ ಅವರು ಸಮಿತಿಗೆ ಗುರುವಾರ ಪತ್ರ ಬರೆದಿದ್ದಾರೆ. ಏಕಕಾಲದಲ್ಲಿ ವಿಧಾನಸಭೆಗಳು ಮತ್ತು ಲೋಕಸಭೆ ಚುನಾವಣೆಗಳನ್ನು ಅಸಹಜ ಅವಧಿಯಲ್ಲಿ ನಡೆಸುವುದು ಮತದಾನದ ಆಯ್ಕೆಯನ್ನು ನಿರ್ಬಂಧಿಸುತ್ತದೆ. ಅದಲ್ಲದೇ, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ದೇಶಕ್ಕೆ ಆರ್ಥಿಕ ಲಾಭವಿದೆ ಎಂಬ ವಾದವನ್ನು ಗುಪ್ತಾ ಅವರು ಅಲ್ಲಗಳೆದಿದ್ದಾರೆ. ಚುನಾವಣೆಗಳಿಗಾಗಿ ಸದ್ಯ ₹4,500 ಕೋಟಿ ವೆಚ್ಚವಾಗುತ್ತಿದೆ. ಇದು ಕೇಂದ್ರ ಬಜೆಟ್‌ನ ಒಟ್ಟು ವೆಚ್ಚದಲ್ಲಿ ಶೇ 0.1ರಷ್ಟು ಮಾತ್ರ ಎಂದು ಅವರು ಹೇಳಿದ್ದಾರೆ.

ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ನಮ್ಮ ಜನಪ್ರತಿನಿಧಿಗಳಿಗಿರುವ ಅಧಿಕಾರದ ಸ್ವರೂಪವು ಆಮೂಲಾಗ್ರವಾಗಿ ಬದಲಾಗುತ್ತದೆ ಎಂದಿದ್ದಾರೆ.

ರಾಜ್ಯಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಪ್ರಾದೇಶಿಕ ಪಕ್ಷಗಳು ಮತ್ತು ಇತರ ಪಕ್ಷಗಳ ವಿರುದ್ಧ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಹೆಚ್ಚು ಅನುಕೂಲಗಳಿವೆ. ಇದು ನ್ಯಾಯೋಚಿತವಲ್ಲ ಎಂದು ಕೂಡಾ ಗುಪ್ತಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಏಕಕಾಲದ ಚುನಾವಣೆ ಕುರಿತ ವಿರೋಧವನ್ನು ಕಾಂಗ್ರೆಸ್‌ ಪಕ್ಷವು ಕೋವಿಂದ್‌ ನೇತೃತ್ವದ ಸಮಿತಿಗೆ ತಿಳಿಸಿರುವ ಬೆನ್ನಲ್ಲೇ ಎಎಪಿ ಪತ್ರ ಬರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT