ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ಮನ್‌ ಚಾಂಡಿ.. ಕೇರಳದಲ್ಲಿ ಕಾಂಗ್ರೆಸ್‌ ಕಟ್ಟಿದ್ದ ಕಟ್ಟಾಳು

ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ನಿಧನ
Published 18 ಜುಲೈ 2023, 15:59 IST
Last Updated 18 ಜುಲೈ 2023, 15:59 IST
ಅಕ್ಷರ ಗಾತ್ರ

ತಿರುವನಂತಪುರ: ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರ ನಿಧನದೊಂದಿಗೆ ಕೇರಳದಲ್ಲಿ ಸುದೀರ್ಘ ಅವಧಿಗೆ ಶಾಸಕರಾಗಿದ್ದ ಹಾಗೂ ಪಕ್ಷನಿಷ್ಠೆಗೆ ಹೆಸರಾಗಿದ್ದ ನಾಯಕನನ್ನು ಕಾಂಗ್ರೆಸ್‌ ಕಳೆದುಕೊಂಡಂತಾಗಿದೆ.

ಎರಡು ಪಕ್ಷಗಳ ನೇತೃತ್ವದ ರಾಜಕಾರಣಕ್ಕೆ ಹೆಸರಾಗಿರುವ ಕೇರಳದಲ್ಲಿ ಕಾಂಗ್ರೆಸ್‌ ಹಲವಾರು ಏಳು–ಬೀಳುಗಳನ್ನು ಕಂಡಿದ್ದರೆ, ಚಾಂಡಿ ಅವರ ರಾಜಕೀಯ ಜೀವನ ಕೂಡ ಇಂತಹ ಏರಿಳಿತಗಳಿಂದ ಮುಕ್ತವಾಗಿದ್ದಿಲ್ಲ.

ಬಿಳಿ ಅಂಗಿ–ಧೋತಿ ಅವರ ಗುರುತಾಗಿತ್ತು. ಆತ್ಮೀಯವಾದ ನಗುವಿನಿಂದ ಎಲ್ಲರಿಗೂ ಆಪ್ತರಾಗುತ್ತಿದ್ದ ಚಾಂಡಿ, ಕ್ರೈಸ್ತರ ಬಾಹುಳ್ಳವಿರುವ ಕೋಟಯಂ ಜಿಲ್ಲೆಯ ಪುದುಪಳ್ಳಿಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರು.

ಕೇರಳ ವಿದ್ಯಾರ್ಥಿ ಕಾಂಗ್ರೆಸ್‌(ಕೆಎಸ್‌ಯು) ಕಾರ್ಯಕರ್ತರಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಅವರು, 1970ರಲ್ಲಿ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅಂದಿನಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.

ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದ ಅವರು, ಜನಾಂದೋಲನದ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪಕ್ಷ ಕಟ್ಟುವ ಕಾರ್ಯದಲ್ಲಿ ಹಿರಿಯ ನಾಯಕ ಎ.ಕೆ.ಆ್ಯಂಟನಿ ಹಾಗೂ ವಯಲಾರ್ ರವಿ ಅವರ ಸಾಥ್‌ ಇತ್ತು.

ಕಾಂಗ್ರೆಸ್‌ನಲ್ಲಿ ಯುವ ನಾಯಕರಾಗಿ ಹೊರಹೊಮ್ಮಿದ ಚಾಂಡಿ, ರಾಜ್ಯ ರಾಜಕಾರಣದಲ್ಲಿ ಎಡಪಕ್ಷಗಳ ಪ್ರಾಬಲ್ಯಕ್ಕೆ ಸಡ್ಡು ಹೊಡೆಯುವಂತೆ ಪಕ್ಷವನ್ನು ಕಟ್ಟಿದ್ದರು. ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ಕರುಣಾಕರನ್ ಮತ್ತು ಆ್ಯಂಟನಿ ಬಣ ರಾಜಕಾರಣ ಶುರುವಾದಾಗ, ಇವರು ಆ್ಯಂಟನಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ ಒಳಜಗಳ ತಾರಕಕ್ಕೇರಿದ ಸಂದರ್ಭದಲ್ಲಿ, ಆ್ಯಂಟನಿ ಅವರ ನಂಬಿಕಸ್ಥ ಹಾಗೂ ಕರುಣಾಕರನ್‌ ವಿರೋಧಿ ಬಣದ ವಿವಾದಾತೀತ ನಾಯಕರೆನಿಸಿದ್ದ ಅವರು, 1985ರಲ್ಲಿ ಕರುಣಾಕರನ್‌ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆಗ, ಆ್ಯಂಟನಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ದಾರಿ ಸುಗಮವಾಗಿತ್ತು.

ಪಕ್ಷದ ಕೇಂದ್ರ ನಾಯಕತ್ವದ ವಿರುದ್ಧವೂ ಚಾಂಡಿ ಬಂಡಾಯವೆದ್ದಿದ್ದರು. ತುರ್ತು ಪರಿಸ್ಥಿತಿ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದನ್ನು ವಿರೋಧಿಸಿದ್ದ ಬಣದೊಂದಿಗೆ ಚಾಂಡಿ ಗುರುತಿಸಿಕೊಂಡಿದ್ದರು. ಕೆಲ ಕಾಲ ಪಕ್ಷದಿಂದ ದೂರವಾಗಿ, 1980ರ ವೇಳೆ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ನಲ್ಲಿದ್ದರು. ಆ್ಯಂಟನಿ ಅವರೊಂದಿಗೆ ಮತ್ತೆ ಅವರು ಕಾಂಗ್ರೆಸ್‌ಗೆ ಮರಳಿದ್ದರು.

2011ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದಾಗ ಚಾಂಡಿ ಮುಖ್ಯಮಂತ್ರಿಯಾಗಿದ್ದರು. ಅಧಿಕಾರದ ಕೊನೆಯ ದಿನಗಳಲ್ಲಿ ಸೌರಶಕ್ತಿ ಘಟಕಗಳ ಸ್ಥಾಪನೆಗೆ ಸಂಬಂಧಿಸಿದ ಹಗರಣ ಅವರಿಗೆ ದೊಡ್ಡ ಸವಾಲು ಒಡ್ಡಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಎಲ್‌ಡಿಎಫ್‌ ಜನಾಂದೋಲನ ನಡೆಸಿತ್ತು. ಮುಂದೆ 2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್‌ ಪರಾಭವಗೊಂಡಿತ್ತು.

ಚುನಾವಣೆಯಲ್ಲಿನ ಹಿನ್ನಡೆ ನಂತರ ಚಾಂಡಿ ಅವರು ವಿರೋಧ ಪಕ್ಷದ ನಾಯಕ ಪಟ್ಟವನ್ನು ರಮೇಶ ಚೆನ್ನಿತಲ ಅವರಿಗೆ ಕಟ್ಟಿದ್ದರು. ಇದು ಅವರ ರಾಜಕೀಯ ಜೀವನದಲ್ಲಿ ತಿರುವಿಗೆ ಕಾರಣವಾಗಿತ್ತು. ಕ್ರಮೇಣ ಅವರು ಕೇರಳ ರಾಜಕಾರಣದ ಮುಖ್ಯಭೂಮಿಕೆಯಿಂದ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT