ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

1977ರಲ್ಲೂ ವಿಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಿರಲಿಲ್ಲ: ಶರದ್‌ ಪವಾರ್‌

Published 27 ಡಿಸೆಂಬರ್ 2023, 16:01 IST
Last Updated 27 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ಅಮರಾವತಿ, ಮಹಾರಾಷ್ಟ್ರ: ‘1977ರ ಲೋಕಸಭೆ ಚುನಾವಣೆ ವೇಳೆಯೂ ವಿರೋಧ ಪಕ್ಷಗಳು ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರಲಿಲ್ಲ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಬುಧವಾರ ಹೇಳಿದರು. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ ಮನೆಮಾಡಿರುವ ಮಧ್ಯೆಯೇ ಅವರು ಹೀಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಕಳಪೆ ಫಲಿತಾಂಶದ ಹೊರತಾಗಿಯೂ, 2024ರ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಜನರು ಬಿಜೆಪಿಗೆ ಪರ್ಯಾಯವಾಗಿ ಆಯ್ಕೆ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂಡಿಯಾ’ ಸದಸ್ಯಪಕ್ಷಗಳ ನಡುವೆ ಸ್ಥಾನ ಹಂಚಿಕೆ ಕುರಿತು ಇನ್ನೂ ಚರ್ಚೆ ನಡೆದಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಆರಂಭವಾಗಿದೆ ಎಂದರು.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಕುರಿತು ಕೇಳಿದ ಪ್ರಶ್ನೆಗೆ, ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷವು ಈಗಾಗಲೇ ಮೈತ್ರಿಕೂಟದ ಭಾಗವಾಗಿದೆ. ಅವರಿಗೆ ನೋವಾಗುವಂಥ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ ಎಂದರು.

ಪ್ರಕಾಶ್‌ ಅಂಬೇಡ್ಕರ್‌ ಅವರ ನೇತೃತ್ವದ ವಂಚಿತ್‌ ಬಹುಜನ ಅಘಾಡಿ (ವಿಬಿಎ) ಪಕ್ಷದ ಕುರಿತು ಕೇಳಿದ ಪ್ರಶ್ನೆಗೆ, ‘ಪ್ರಕಾಶ್‌ ಅವರ ಜೊತೆ ಮಾತನಾಡಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳೆದ ‘ಇಂಡಿಯಾ’ ಸಭೆಯಲ್ಲಿ ಹೇಳಿದ್ದೆ. ಬಳಿಕ ಏನಾಯಿತೆಂದು ತಿಳಿಯಲಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT