ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್, ಹೈಕೋರ್ಟ್‌ ನ್ಯಾಯಮೂರ್ತಿಗಳಿಂದಲೂ ಆಸ್ತಿವಿವರ ಘೋಷಣೆ

ಕಡ್ಡಾಯಗೊಳಿಸಿ ಕಾಯ್ದೆ ರೂಪಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
Published 7 ಆಗಸ್ಟ್ 2023, 16:36 IST
Last Updated 7 ಆಗಸ್ಟ್ 2023, 16:36 IST
ಅಕ್ಷರ ಗಾತ್ರ

ನವದೆಹಲಿ: ‘ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ಸಕ್ಷಮ ಪ್ರಾಧಿಕಾರದ ಎದುರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಘೋಷಿಸುವಂತೆ ಕಾಯ್ದೆ ರೂಪಿಸಬೇಕು’ ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ಕಾನೂನು ಮತ್ತು ಸಿಬ್ಬಂದಿ ಆಡಳಿತ ಕುರಿತ ಸ್ಥಾಯಿ ಸಮಿತಿಯು, ‘ನ್ಯಾಯಮೂರ್ತಿಗಳು ವಾರ್ಷಿಕ ಆಸ್ತಿ ವಿವರ ಘೋಷಿಸುವುದನ್ನು ಹಾಗೂ ಈ ವಿವರಗಳನ್ನು ಸಾರ್ವಜನಿಕವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳು ಸ್ವಯಂಪ್ರೇರಿತವಾಗಿ ಆಸ್ತಿ ವಿವರಗಳನ್ನು ಘೋಷಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಈ ಹಿಂದೆ ಅಂಗೀಕರಿಸಿರುವ ನಿರ್ಣಯವು ಒಪ್ಪಿತವಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

‘ಉನ್ನತ ಕೋರ್ಟ್‌ಗಳ ನ್ಯಾಯಮೂರ್ತಿಗಳು ಸಕ್ಷಮ ಪ್ರಾಧಿಕಾರದ ಎದುರು ಪ್ರತಿವರ್ಷ ಆಸ್ತಿ ವಿವರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿ ಕಾಯ್ದೆ ರೂಪಿಸಲು ಶಿಫಾರಸು ಮಾಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

‘ನ್ಯಾಯಾಂಗದಲ್ಲಿ ಮೌಲ್ಯಗಳ ಮರುಸ್ಥಾಪನೆ’ ಕುರಿತಂತೆ ಸುಪ್ರೀಂ ಕೋರ್ಟ್‌ನ ಪೂರ್ಣ ಸಭೆ ಮೇ 7, 1997ರಲ್ಲಿ ಅಂಗೀಕರಿಸಿದ ನಿರ್ಣಯವು ನಿರ್ದಿಷ್ಟವಾಗಿ ಕೆಲವೊಂದು ನ್ಯಾಯಾಂಗ ಮಾನದಂಡಗಳಿರಬೇಕು ಎಂದು ಪ್ರತಿಪಾದಿಸಿದೆ ಎಂದು ವರದಿ ಉಲ್ಲೇಖಿಸಿದೆ.

‘ಈ ನಿರ್ಣಯದ ಪ್ರಕಾರ, ಪ್ರತಿ ವರ್ಷ ಸುಪ್ರೀಂ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಪ್ರಕಟಿಸಬೇಕು. ಆ. 26, 2009ರ ಸಭೆಯಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು, ‘ನ್ಯಾಯಮೂರ್ತಿಗಳು ಸಲ್ಲಿಸಿದ ಆಸ್ತಿವಿವರಗಳನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ತೀರ್ಮಾನ ಕೈಗೊಂಡಿದೆ’ ಎಂದು ಉಲ್ಲೇಖಿಸಿದೆ.

ಪ್ರಸ್ತುತ, ವೆಬ್‌ಸೈಟ್‌ನಲ್ಲಿ ಮಾರ್ಚ್‌ 31, 2018ರಲ್ಲಿ ಇರುವಂತೆ 55 ನ್ಯಾಯಮೂರ್ತಿಗಳು ಘೋಷಿಸಿಕೊಂಡಿರುವ ಆಸ್ತಿ ವಿವರಗಳಿವೆ. ‘ನ್ಯಾಯಾಂಗದಲ್ಲಿ ಮೌಲ್ಯಗಳ ಮರುಸ್ಥಾಪನೆ’ ಕುರಿತು ಸುಪ್ರೀಂ ಕೋರ್ಟ್‌ನ ನಿರ್ಣಯದ ಅನುಷ್ಠಾನ ಕುರಿತಂತೆ ಈಗ ಯಾವುದೇ ಕಾನೂನು ಮಾನ್ಯತೆ ಇಲ್ಲವಾಗಿದೆ ಎಂದು ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT