ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಗಳಲ್ಲಿ ₹150 ಲಕ್ಷ ಕೋಟಿ ಸಾಲ ಹೆಚ್ಚಿಸಿದ ಪ್ರಧಾನಿ ಮೋದಿ: ಪ್ರಿಯಾಂಕಾ

Published 30 ಮಾರ್ಚ್ 2024, 7:19 IST
Last Updated 30 ಮಾರ್ಚ್ 2024, 7:19 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ₹14 ಲಕ್ಷ ಕೋಟಿಗೂ ಹೆಚ್ಚು ಸಾಲ ಪಡೆಯುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟಿನ ಹೊರೆ ಹೆಚ್ಚುತ್ತಿದೆ. ಆದರೆ, ಸರ್ಕಾರ ಜನರಿಗೆ ಪರಿಹಾರ ನೀಡುವ ಬದಲು ಅವರನ್ನು ಸಾಲದ ಸುಳಿಯಲ್ಲಿ ಮುಳುಗಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಏಪ್ರಿಲ್‌ 1ರಿಂದ ಪ್ರಾರಂಭಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ ಆದಾಯ ಕೊರತೆಯನ್ನು ಪೂರೈಸಲು ಒಟ್ಟು ₹14.13 ಲಕ್ಷ ಕೋಟಿ ಮೊತ್ತವನ್ನು ಬಾಂಡ್‌ಗಳ ಮೂಲಕ ಸಂಗ್ರಹಿಸಲಾಗುವುದು ಎಂದು ಕಳೆದ ತಿಂಗಳ (ಫೆಬ್ರುವರಿ) ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ‘ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರವು ₹14 ಲಕ್ಷ ಕೋಟಿಗಿಂತ ಹೆಚ್ಚು ಸಾಲವನ್ನು ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಸಾಲವನ್ನು ಏಕೆ ಪಡೆಯುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ಸ್ವಾತಂತ್ರ್ಯದ ನಂತರ 2014ರವರೆಗಿನ 67 ವರ್ಷಗಳಲ್ಲಿ ದೇಶದ ಒಟ್ಟು ಸಾಲವು ₹55 ಲಕ್ಷ ಕೋಟಿ ಇತ್ತು. ಆದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅದನ್ನು ₹205 ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಮೂಲಕ ಮೋದಿ ಸರ್ಕಾರ ಸುಮಾರು ₹150 ಲಕ್ಷ ಕೋಟಿ ಸಾಲ ಮಾಡಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಂದು, ದೇಶದ ಪ್ರತಿಯೊಬ್ಬ ಪ್ರಜೆಯು ಸರಾಸರಿ ₹1.5 ಲಕ್ಷ ಸಾಲವನ್ನು ಹೊಂದಿದ್ದಾನೆ. ಈ ಹಣವನ್ನು ರಾಷ್ಟ್ರ ನಿರ್ಮಾಣದ ಯಾವ ಅಂಶಕ್ಕಾಗಿ ಬಳಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆಯೇ, ರೈತರ ಆದಾಯ ದ್ವಿಗುಣಗೊಂಡಿದೆಯೇ, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಹೊಸ ರೂಪ ನೀಡಲಾಗಿದೆಯೇ, ಸಾರ್ವಜನಿಕ ವಲಯವನ್ನು ಬಲಪಡಿಸಲಾಗಿದೆಯೇ, ದೊಡ್ಡ ಕಾರ್ಖಾನೆಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆಯೇ’ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

‘ಈ ಹಣವನ್ನು ಯಾರಿಗೆ ಖರ್ಚು ಮಾಡಲಾಗಿದೆ, ದೊಡ್ಡ ಕೋಟ್ಯಧಿಪತಿಗಳ ಸಾಲ ಮನ್ನಾ ಮಾಡಲು ಎಷ್ಟು ಹಣ ಖರ್ಚು ಮಾಡಲಾಗಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟಿನ ಹೊರೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ಬಿಜೆಪಿ ಸರ್ಕಾರ ಜನರಿಗೆ ಪರಿಹಾರ ನೀಡುವ ಬದಲು ಅವರನ್ನು ಸಾಲದ ಸುಳಿಯಲ್ಲಿ ಮುಳುಗಿಸುತ್ತಿರುವುದು ಏಕೆ‘ ಎಂದು ಅವರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT